ಹುನಗುಂದ: ಶಿಸ್ತು, ಬದ್ಧತೆ, ಸಂಯಮ, ಏಕಾಗ್ರತೆೆಗಳೇ ಯಶಸ್ಸಿನ ಜೀವಾಳಗಳು ಎಂದು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಕಾಲೇಜು ಒಕ್ಕೂಟ, ಎನ್.ಎಸ್.ಎಸ್. ಕಾರ್ಯಚಟುವಟಿಕೆ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ನಿವೃತ್ತರು ಮತ್ತು ದಾನಿಗಳ ಸತ್ಕಾರ ಸಮಾರಂಭವನ್ನು ಗುರವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಅದರಲ್ಲೂ ಪಿಯು ಹಂತದ ವಿದ್ಯಾರ್ಥಿ ಜೀವನ ಬದುಕಿನಲ್ಲಿ ದಿಕ್ಸೂಚಿ ಅವಧಿಯಾಗಿದ್ದು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಸತತ ಅಧ್ಯಯನದ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಪ್ರಜಾಪ್ರಭುತ್ವದ ಆಶಯವನ್ನು ಅನುಷ್ಠಾನಕ್ಕೆ ತರುವಲ್ಲಿ ವಿದ್ಯಾರ್ಥಿಗಳ ಪಾತ್ರ ತುಂಬ ಮಹತ್ವದ್ದಿದೆ. ವಿದ್ಯಾರ್ಥಿ ಪ್ರತಿನಿಧಿಗಳಾದವರು ಕಾಲೇಜಿನಲ್ಲಿ ಆ ಆಶಯಕ್ಕೆ ಬದ್ಧರಾಗಿರಬೇಕೆಂದರು.
ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ಹಣವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದು ಎಲ್ಲ ಮಕ್ಕಳು ಅದರ ಸದುಪಯೋಗಪಡಿಸಿಕೊಳ್ಳಬೇಕೆಂದರಲ್ಲದೇ ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತೆ ಹುನಗುಂದದಲ್ಲಿ ಮಹಿಳಾ ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಸ್ಥಾಪಿಸಲು ಮೊದಲ ಆದ್ಯತೆ ನೀಡಲಾಗುವದು ಎಂದರು.
ತಹಶೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿ, ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಂಡು ಮಾದರಿ ಪ್ರಜೆಗಳಾಗಬೇಕೆಂದರಲ್ಲದೇ ನಿವೃತ್ತರಾದ ಸಿದ್ದಲಿಂಗಪ್ಪ ಬೀಳಗಿ ಮತ್ತು ಎಸ್ಕೆ ಕೊನೆಸಾಗರ ಅವರ ಸೇವೆಯನ್ನು ಸ್ಮರಿಸಿದರು.
ಇನ್ನೋರ್ವ ಅತಿಥಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿಯವರು ಮಾತನಾಡಿ, ಹುನಗುಂದದಲ್ಲಿ ಉತ್ತಮ ಶೈಕ್ಷಣಕ ವಾತಾವರಣವಿದ್ದು ಅದರ ಸದುಪಯೋಗಕ್ಕೆ ಎಲ್ಲರೂ ಕೈಗೂಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ತಹಶೀಲ್ದಾರ್ ನಿಂಗಪ್ಪ ಬಿರಾದಾರ, ಸಿದ್ದಲಿಂಗಪ್ಪ ಬೀಳಗಿ ಮತ್ತು ಎಸ್ಕೆ ಕೊನೆಸಾಗರ ಇವರನ್ನು ಕಾಲೇಜಿನ ಪರವಾಗಿ ಸತ್ಕರಿಸಲಾಯಿತು.
ಸನ್ಮಾನಿತರ ಪರವಾಗಿ ಸಿದ್ದಲಿಂಗಪ್ಪ ಬೀಳಗಿ ಮತ್ತು ಎಸ್ಕೆ ಕೊನೆಸಾಗರ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹಾಂತೇಶ ಪರೂತಿ ಮತ್ತು ಸರ್ವ ಸದಸ್ಯರು, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.
ಸೇವಂತಿ ಬೆಣಗಿ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಕೆ. ಹೂಲಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಕೆ ಶಶಿಮಠ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಎನ್.ವಾಯ್.ನದಾಫ ನಿರೂಪಿಸಿದರು. ಎಚ್.ಟಿ.ಅಗಸಿಮುಂದಿನ ವಂದಿಸಿದರು.