ಮುದ್ದೇಬಿಹಾಳ : ಮೂಲಸೌರ‍್ಯಗಳನ್ನೂ ಒದಗಿಸದೇ ತಾಂತ್ರಿಕ ಕೆಲಸಗಳನ್ನು ಮಾಡಲು ಒತ್ತಡ ಹೇರುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಲೇಖನಿ ಸ್ಥಗಿತಗೊಳಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಗುರುವಾರದಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. 100ಕ್ಕೂ ಅಧಿಕ ಸೇವೆಗಳನ್ನು ಗ್ರಾಮ ಆಡಳಿತಾಧಿಕಾರಿಗಳು ತುಂಬಾ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಲ್ಯಾಪ್‌ಟಾಪ್, ಇಂಟರ್‌ನೆಟ್ ಮೂಲಕ ಮಾಡಬೇಕಾದ ಸೇವೆಗಳನ್ನು ಅಗತ್ಯ ಭೌತಿಕ ಸಾಮಗ್ರಿ ನೀಡದೇ ಕೆಲಸ ಮಾಡಲು ಸರ್ಕಾರ ಒತ್ತಡ ಹೇರುತ್ತಿದೆ.ಸರ್ಕಾರಿ ನೌಕರಿ ಯಾಕಾದರೂ ಮಾಡುತ್ತಿದ್ದೇವೆ ಎಂಬ ಬೇಸರದ ಭಾವನೆ ಮೂಡಿದೆ. ಇದರಿಂದ ನೌಕರರ ಮಾನಸಿಕ ಸ್ಥಿತಿ,ಕೌಟುಂಬಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಹೇಳಿದರು.
ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ ಮಾತನಾಡಿ, ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕು. ಸುಮಾರು 17ಕ್ಕೂ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು ಇವುಗಳ ನಿರ್ವಹಣೆಗೆ ಅವಶ್ಯಕತೆಯಾಗಿರುವ ಮೊಬೈಲ್, ಲ್ಯಾಪಟಾಪ್, ಇಂಟರನೆಟ್, ಸ್ಕ್ಯಾನರ್ ಒದಗಿಸದೇ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ರಾಜ್ಯದಲ್ಲಿ 50ಕ್ಕೂ ಅಧಿಕ ನೌಕರರು ಒತ್ತಡ ತಾಳದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಸಂಖ್ಯೆ ಇನ್ನೂ ಹೆಚ್ಚುವ ಮುನ್ನ ಸರ್ಕಾರ ತಕ್ಷಣ ಮಧ್ಯೆಪ್ರವೇಶಿಸಿ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸಬೇಕು ಎಂದರು.
ಕಂದಾಯ ನೌಕರರ ಸಂಘದ ಮುಖಂಡ ವೆಂಕಟೇಶ ಅಂಬಿಗೇರ, ಗ್ರಾಮ ಆಡಳಿತ ಅಧಿಕಾರಿ ರಫೀಕ ಮುಲ್ಲಾ, ಶ್ರೀನಿವಾಸ ಹುನಗುಂದ ಮಾತನಾಡಿದರು.
ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ, ದಲಿತ ಮುಖಂಡರಾದ ಹರೀಶ ನಾಟೀಕಾರ, ಪ್ರಕಾಶ ಚಲವಾದಿ, ಆನಂದ ದೇವೂರ ಮತ್ತಿತರರು ಬೆಂಬಲಿಸಿದರು. ಹೋರಾಟದ ಸ್ಥಳದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಿರ್ವಹಿಸಬೇಕಾದ ಸೇವೆಗಳನ್ನು ಒಂದೇ ಫಲಕದಲ್ಲಿ ಹಾಕಿದ್ದು ಗಮನ ಸೆಳೆಯಿತು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮನೋಜ ರಾಠೋಡ, ಡಿ.ಎಸ್.ಗುರಿಕಾರ, ಎಸ್.ಬಿ.ಕುಂಬಾರ, ಎ.ಎಸ್.ಬಾಬಾನಗರ, ಸಚಿನ ಗೌಡರ, ಆರ್.ಎಸ್.ಹೊಸೂರ, ಸಿ.ಬಿ.ಚವ್ಹಾಣ, ಕೆ.ಎಚ್.ನದಾಫ, ಎಸ್.ಎಂ.ಚವ್ಹಾಣ, ಕೆ.ಎಂ.ಅಲಗೂರ, ಹರ್ಷಿತಗೌಡ ಎಚ್., ಬಿ.ಕೆ.ನಂದಗಾವ, ಆರತಿ ಬಳವಾರ, ಎಂ.ಆರ್.ಇಬ್ರಾಹಿಂಪೂರ, ಅನುಪಮಾ ಪೂಜಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಹೋರಾಟಕ್ಕೆ ಕಂದಾಯ ನೌಕರರ ಸಂಘ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಕರ್ನಾಟಕ ಪರವಾನಿಗೆ ಭೂಮಾಪಕರ ಸಂಘ ಬೆಂಬಲ ಸೂಚಿಸಿದವು.
ಸಾರ್ವಜನಿಕರ ಪರದಾಟ:
ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು.ಜಾತಿ,ಆದಾಯ ಪ್ರಮಾಣಪತ್ರಗಳು, ಜನನ,ಮರಣ ಪ್ರಮಾಣಪತ್ರಗಳು ಸಕಾಲಕ್ಕೆ ದೊರೆಯದೇ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಕೆಲವರು ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ಗ್ರಾಮ ಆಡಳಿತ ಅಧಿಕಾರಿಗಳ ಸಹಿಗಾಗಿ ಹೋರಾಟ ಸ್ಥಳದಲ್ಲೇ ಕಾಯ್ದು ನಿಂತು ವಾಪಸ್ ಮರಳಿದ ಪ್ರಸಂಗಗಳು ಕಂಡು ಬಂದವು.