ಮುದ್ದೇಬಿಹಾಳ : ಶೋಷಿತ ಸಮುದಾಯಗಳಿಗೆ ವಿದ್ಯೆ ಹಾಗೂ ಅಂತಸ್ತು ಸರಿಸಮಾನವಾಗಿ ಬರಬೇಕು ಎಂಬ ಉದ್ದೇಶವಿಟ್ಟುಕೊಂಡು ಡಾ.ಅಂಬೇಡ್ಕರ್ ಬರೆದಿರುವ ಸಂವಿದಾನ ಈ ದೇಶದ ಬೈಬಲ್, ಪುರಾಣ, ಧರ್ಮಗ್ರಂಥ ಆಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಬಳಿ ಇರುವ ಏಳು ಮಕ್ಕಳ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಇತಿಹಾಸ ಓದಿ ಮರೆತಿಲ್ಲ. ಅವರು ಸಮಾಜದ ಬಗ್ಗೆ ಯೋಚಿಸಿ ಸಂವಿದಾನ ಬರೆದಿದ್ದಾರೆ. ಅಂಬೇಡ್ಕರ್ ಜಯಂತಿ ಆಚರಣೆ ಮಾಡಿ ಮನೆಗೆ ಹೋಗುವುದಲ್ಲ. ಸಮಾಜದಲ್ಲಿ ಮುಂದೆ ಬರುವ ಚಿಂತನೆ ಇರಬೇಕು. ದೇವರ ಆರಾಧನೆ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿರುವ ಕಾರ್ಯ ಹೊಸ ಚಿಂತನೆ, ಬದಲಾವಣೆಗೆ ಸಾಕ್ಷಿಯಾಗಿದೆ ಎಂದರು.
ಮುದ್ದೇಬಿಹಾಳದಲ್ಲಿ ಎಸ್.ಸಿ. ಎಸ್ಟಿ ಜನಾಂಗದವರ ಮಕ್ಕಳಿಗೆ ಮೂವ್ವತ್ತು ಕೋಟಿ ರೂ. ವೆಚ್ಚದಲ್ಲಿ ವಸತಿ ಕಾಲೇಜು ಕಟ್ಟಿಸಿದ್ದೇವೆ. ನಮ್ಮ ಸರ್ಕಾರ 156 ಭರವಸೆಗಳನ್ನು ಈಡೇರಿಸಿದೆ ಎಂದರು.
ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ದೇವಿಗೆ ಬಲಿ ಕೊಡುವ ಸಂಪ್ರದಾಯ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲೂ ಇಲ್ಲ. ಮಹಾತ್ಮಾ ಗಾಂಧೀಜಿ ಅವರು ಅಲ್ಲಿಗೆ ಭೇಟಿ ನೀಡಿದ್ದಾಗ ಪ್ರಾಣಿ ಬಲಿ ವಿರೋಧಿಸಿದರು. ಅಷ್ಟಕ್ಕೂ ದೇವಿಗೆ ರಕ್ತದ ಅಭಿಷೇಕವೇ ಬೇಕಾದರೆ ಸೀರಿಂಜ್‌ನಲ್ಲಿ ಪ್ರಾಣಿಗಳ ಅಲ್ಪ ರಕ್ತ ತೆಗೆದು ದೇವಿಗೆ ನೈವೇದ್ಯ ಅರ್ಪಿಸುವ ಸಲಹೆ ನೀಡಿದಾಗ ಅದನ್ನು ಒಪ್ಪಿ ಇಂದಿಗೂ ಅಲ್ಲಿ ಪ್ರಾಣಿ ಬಲಿ ಆಚರಣೆ ಇಲ್ಲ. ನೀವೆಲ್ಲ ಮೂಢನಂಬಿಕೆ ಬದಿಗಿಡಿ. ದೇವರ ಹೆಸರಿನಲ್ಲಿ ಪ್ರಾಣಿ ಹಿಂಸೆ ಮಾಡಬೇಡಿ ಎಂದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ಕಸಾಪ ಮಾಜಿ ಅಧ್ಯಕ್ಷ ಎಂ. ಬಿ. ನಾವದಗಿ, ಉದ್ಯಮಿ ಎ.ಗಣೇಶ ನಾರಾಯಣಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ವಾಲ್ಮೀಕಿ ಸಮಾಜದ ಮುಖಂಡ ಹುಲಗಪ್ಪ ನಾಯ್ಕಮಕ್ಕಳ, ಮುಖಂಡರಾದ ರೇವಣೆಪ್ಪ ಹರಿಜನ,ಯಲ್ಲಪ್ಪ ಚಲವಾದಿ, ಕರ್ನಾಟಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ಬಿರಾದಾರ, ನಿರ್ದೇಶಕ ಶ್ರೀಕಾಂತ ಚಲವಾದಿ, ಅಕ್ಷಯ ಅಜಮನಿ, ವಾಯ್.ಎಚ್.ವಿಜಯಕರ್ ಮೊದಲಾದವರು ಇದ್ದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀಶೈಲ ಹೂಗಾರ ನೇತೃತ್ವದ ಇಂಚರ ಮೆಲೋಡಿಸ್ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.