ಮುದ್ದೇಬಿಹಾಳ : ಕಲ್ಯಾಣ ಕರ್ನಾಟಕ ಸಾರಿಗೆ ಘಟಕದ ಬಸ್ ವೊಂದರ ಬ್ರೇಕ್ ಫೇಲ್ ಆಗಿ ರಸ್ತೆ ಬದಿ ಇದ್ದ ಮನೆ ಮುಂದೆಯೇ ನುಗ್ಗಿದ್ದು ಭಾರೀ ಅನಾಹುತವೊಂದು ತಪ್ಪಿದ ಘಟನೆ ತಾಲ್ಲೂಕಿನ ಹಿರೇಮುರಾಳದ ನೆರಬೆಂಚಿ ಕ್ರಾಸ್ ಬಳಿ ಬುಧವಾರ ನಡೆದಿದೆ.
ಮುದ್ದೇಬಿಹಾಳದಿಂದ ನಾರಾಯಣಪುರ ಕಡೆಗೆ ಬಸ್ ತೆರಳುತ್ತಿತ್ತು. ಅದರಲ್ಲಿ ಮೂವರು ಪ್ರಯಾಣಿಕರು ಇದ್ದರು. ಚಾಲಕ ಕಂ ನಿರ್ವಾಹಕ ಇದ್ದ ಬಸ್ ನ ಬ್ರೇಕ್ ಏಕಾಏಕಿ ಫೇಲ್ ಆಗಿದ್ದು ನೆರಬೆಂಚಿ ಕ್ರಾಸ್ ಬಳಿ ಇದ್ದ ಮನೆಯೊಂದರ ಮುಂದೆಯೇ ನುಗ್ಗಿದೆ. ಇದರಿಂದ ಬಸ್ ನ ಮುಂಭಾಗದ ಗ್ಲಾಸ್ ಒಡೆದಿದೆ.
ಟಂಟಂವೊಂದು ಮನೆ ಮುಂದೆ ನಿಲುಗಡೆ ಮಾಡಿದ್ದು ಅದಕ್ಕೆ ಡಿಕ್ಕಿ ಹೊಡೆಯುವುದರಿಂದ ಬಚಾವ್ ಆಗಿದೆ.ಅದೃಷ್ಟವಶಾತ್ ಮನೆಯ ಅಂಗಳದಲ್ಲಿ ಯಾವುದೇ ಮಕ್ಕಳು,ಜನ ಇಲ್ಲದ ಅನಾಹುತವೊಂದು ತಪ್ಪಿದೆ.
ಘಟನೆಯಲ್ಲಿ ಯಾರಿಗೂ ಹೆಚ್ಚಿನ ಪ್ರಮಾಣದ ಗಾಯವಾಗಿಲ್ಲ. ಬಸ್ ಸ್ಥಿತಿಗತಿ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು,ಮೆಕ್ಯಾನಿಕ್ ವಿಭಾಗದವರು ಪರಿಶೀಲಿಸಿ ಸಾರ್ವಜನಿಕರ ಬಳಕೆಗೆ ಬಿಡಬೇಕಿತ್ತು. ಅನಾಹುತವಾದರೆ ಅದಕ್ಕೆ ಹೊಣೆ ಯಾರದ್ದು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.