ಹೊಸಕೋಟೆ; ಜಮೀನು ವಿಚಾರಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ದಬ್ಬಗುಂಟಹಳ್ಳಿಯ ಗೋವಿಂದಪ್ಪ (53 ವರ್ಷ) ಕೊಲೆಯಾದ ದುರ್ದೈವಿ. ಅದೇ ಗ್ರಾಮದ ಮಂಜುನಾಥ್ (42 ವರ್ಷ) ಕೊಲೆ ಮಾಡಿದ ಆರೋಪಿ.
ಕೊಲೆಯಾದ ಗೋವಿಂದಪ್ಪನಿಗೆ ಮಂಜುನಾಥ್ ಬಾಮೈ ದನಾಗಬೇಕು. 20 ಗುಂಟೆ ಜಮೀನು ವಿಚಾರಕ್ಕೆ ಇಬ್ಬರೂ ಆಗಾಗ್ಗೆ ಜಗಳ ಮಾಡಿ ಕೊಳ್ಳುತ್ತಿದ್ದರು. ಗ್ರಾಮಸ್ಥರು ಜಗಳವನ್ನು ತಿಳಿಗೊಳಿಸುತ್ತಿದ್ದರು.
ಆದರೆ ಮಂಗಳವಾರ ಬೆಳಿಗ್ಗೆ ಗೋವಿಂದಪ್ಪ ಜಮೀನಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಂಜುನಾಥ್ ಗೋವಿಂದಪ್ಪನನ್ನು ಅಡ್ಡಗಟ್ಟಿ ಜಗಳ ತೆಗೆದ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ್ ದೊಣ್ಣೆಯಿಂದ ಬಲವಾಗಿ ಗೋವಿಂದಪ್ಪ ಅವರ ತಲೆಗೆ ಬಾರಿಸಿದ್ದಾರೆ. ಈ ವೇಳೆ ತಲೆಗೆ ಭಾರಿ ಪೆಟ್ಟಾಗಿ ಅಧಿಕ ರಕ್ತಸ್ರಾವವಾಗಿದ್ದ ಗೋವಿಂದಪ್ಪರನ್ನು ಸ್ಥಳೀಯರು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಿದರೂ ಗೋವಿಂದಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಡಿವೈ ಎಸ್ಪಿ ಅಣ್ಣಾಸಾಹೇಬ್ ಪಾಟೀಲ್, ಪಿಐ ಅಶೋಕ್ ಭೇಟಿ ನೀಡಿ ಸ್ಥಳವನ್ನು ಪರಿಶೀಲನೆ ನಡೆಸಿದರು. ಬಳಿಕ ಕೊಲೆ ಮಾಡಿದ ಆರೋಪಿ ಮಂಜುನಾಥ್‌ರನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಎಸ್ಪಿ ಭೇಟಿ, ಪರಿಶೀಲನೆ: ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಟಾಧಿಕಾರಿ ಸಿ.ಕೆ.ಬಾಬಾ, ಎಎಸ್ಪಿ ನಾಗೇಶ್ ಕುಮಾರ್ ದಬ್ಬಗುಂಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೊಲೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿದರು.
ಡಿವೈಎಸ್ಪಿ ಅಣ್ಣ ಸಾಹೇಬ್ ಪಾಟೀಲ್ ಅವರಿಂದ ಮಾಹಿತಿಯನ್ನು ಪಡೆದರು. ಬೆರಳಚ್ಚು ತಜ್ಞರು ಭೇಟಿ ನೀಡಿ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಿದರು.