ಹುನಗುಂದ: ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರವಾಗದೆ ದೇಶದ ಉದ್ಧಾರವಾಗದು. ಗಾಂಧೀಜಿಯವರ ಕನಸನ್ನು ನನಸಾಗಿಸುವಲ್ಲಿ, ಗ್ರಾಮ ಜೀವನವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತಲಿವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಹುನಗದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾವರಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಶಿಬಿರದಲ್ಲಿ ಗಳಿಸಿದ ಅನುಭವವನ್ನು ವಿದ್ಯಾರ್ಥಿಗಳು ಮುಂಬರುವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆಕೊಟ್ಟರು.
ವಿಶೇಷ ಆಹ್ವಾನಿತರಾಗಿ ಹಾಜರಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಭಾವೈಕ್ಯತೆ, ಭ್ರಾತೃತ್ವ, ಪರಸ್ಪರ ಅವಲಂಬನೆ ಯಂತಹ ಹಲವಾರು ಗುಣಗಳನ್ನು ಇಂತಹ ಶಿಬಿರಗಳು ಉತ್ತೇಜಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಡಾ.ಹೆಚ್ ಎಸ್ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಮಹಾಂತೇಶ ಕಾಶಪ್ಪನವರ್ ಹಾಗೂ ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರು,ಸಿ.ಡಿ.ಸಿ ಸದಸ್ಯರು ಉಪಸ್ಥಿತರಿದ್ದರು. ಸಂಚಾಲಕರಾದ ಶ್ರೀ ಬಿ ವೈ ಆಲೂರ ಸ್ವಾಗತಿಸಿದರು, ಶ್ರೀದೇವಿ ಕಡಿವಾಲ ವಂದಿಸಿದರು.