ಮುದ್ದೇಬಿಹಾಳ : ಯಾರಿಗೆ ಮಾರುಕಟ್ಟೆಯಲ್ಲಿ ಬೆಲೆ ಇದೆಯೋ ಅಂತವರನ್ನು ತೊಡಗಿಸಿಕೊಂಡು ಮಾರುಕಟ್ಟೆ ತಂತ್ರಗಾರಿಕೆ ಹೆಣೆದರೆ ಮಾತ್ರ ನಮ್ಮ ವ್ಯಾಪಾರ ಹೆಚ್ಚಾಗುವುದಕ್ಕೆ ಸಾಧ್ಯವಿದೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಅಗತ್ಯವಿಲ್ಲ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪು ಮಾರಾಟಕ್ಕೆ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದ್ದರ ಹಿಂದೆ ಮಾರುಕಟ್ಟೆಯ ತಂತ್ರಗಾರಿಕೆ ಇದೆ. ಅವರಿಗೆ ದೇಶವ್ಯಾಪಿ ಹೆಚ್ಚಿನ ಫಾಲೋವರ್ಸ್ ಇದ್ದು ಅದರಿಂದ ಮಾರಾಟದಲ್ಲಿ ಹೆಚ್ಚಳವಾಗಲಿದೆ ಎಂದರು.
ಈಗಾಗಲೇ ಶೇ.15 ರಿಂದ 18% ರಷ್ಟು ಸೋಪು ಮಾರಾಟ ಹೆಚ್ಚಳವಾಗಿದೆ. ಈ ಮುಂಚೆ ಇಂತಹದ್ದೇ ನಟಿಯನ್ನು ಪ್ರಚಾರಕ್ಕೆ ನೇಮಿಸಲು ನಿರ್ಧಾರ ಮಾಡಿರಲಿಲ್ಲ. ಎಂ. ಬಿ. ಪಾಟೀಲ ಅವರು ಮಂತ್ರಿ ಇದ್ದಾಗ ಈ ನಿರ್ಧಾರ ತಗೆದುಕೊಂಡಿದ್ದರು. ಕರ್ನಾಟಕದ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಪೂಜಾ ಮತ್ತಿತರರು ಬೇರೆ ಬೇರೆ ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅವರನ್ನು ಕೈ ಬಿಟ್ಟು ತಮನ್ನಾ ಅವರನ್ನು ಜಾಹೀರಾತಿನಲ್ಲಿ ತೊಡಗಿಸಿದರೆ ಮಾರುಕಟ್ಟೆಯಲ್ಲಿ ಮೈಸೂರು ಸ್ಯಾಂಡಲ್ ಸೋಪು ಮಾರಾಟ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸ್ಥಳೀಯವಾಗಿ ಸಾಮಾನ್ಯ ಜನರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಸಾಧ್ಯವಿದೆ. ಕರ್ನಾಟಕದಲ್ಲಿ ಸಾಮಾನ್ಯ ಜನರು ಸೋಪು ಬಳಸಿದ ಬಳಿಕ ಅದರ ಗುಣಮಟ್ಟ ಹೇಗಿದೆ ಎಂದು ಜಾಹೀರಾತು ಮಾಡಿ ಅದನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುವ ಉದ್ದೇಶವಿದೆ. ನಮಗೆ ಯಾರಿಗೂ ಮನಸ್ಸಿಗೆ ತೊಂದರೆ ಕೊಡುವ ವಿಚಾರವಲ್ಲ. 25-30 ವರ್ಷದ ಹಿಂದೆ ಯರ‍್ಯಾರು ಈ ಸೋಪಿನ ಪ್ರಚಾರ ರಾಯಭಾರಿಗಳಾಗಿದ್ದರು ಎಂಬುದನ್ನು ದಾಖಲೆಗಳ ಸಮೇತ ಮುಂದೆ ಹೇಳುತ್ತೇನೆ. ಮಾರುಕಟ್ಟೆ ತಂತ್ರಗಾರಿಕೆ ಇದು ವ್ಯಾಪಾರ. ಸೀಮಿತವಾಗಿ ಮಾಡುವಂತಹದ್ದಲ್ಲ ಎಂದು ಹೇಳಿದರು.
ಸೌದಿಯಲ್ಲಿ ನಮ್ಮ ರಾಜ್ಯದ ಸೋಪು ಮಾರಬೇಕಾದರೆ ಅಲ್ಲಿನವರ ಮಾಡೆಲ್‌ನವರನ್ನು ತಗೆದುಕೊಂಡೇ ಪ್ರಚಾರ ಮಾಡಬೇಕಾಗುತ್ತದೆ. ಯಾರ ಭಾವನೆಗಳಿಗೂ ಧಕ್ಕೆ ತಂದಿಲ್ಲ. ಮುಂದೊಂದು ದಿನ ಬೇರೆ ಬೇರೆ ರಾಜ್ಯಗಳಲ್ಲಿ ಸೋಪು ಮಾರಾಟ ಮಾಡಬೇಕಾದರೆ ಅಲ್ಲಿನ ಪ್ರಾದೇಶಿಕತೆಯನ್ನೇ ಆಧಾರವಾಗಿಟ್ಟುಕೊಂಡು ನಾವು ಮಾರುಕಟ್ಟೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಮುಖಂಡ ಸಿ.ಬಿ.ಅಸ್ಕಿ, ವಾಯ್. ಎಚ್. ವಿಜಯಕರ್, ಸದು ಮಠ ಇದ್ದರು.