ಮುದ್ದೇಬಿಹಾಳ : ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮುದ್ದೇಬಿಹಾಳ ಪಟ್ಟಣದಲ್ಲಿ ಮೇ.30 ರಿಂದ ಆರಂಭಗೊಳ್ಳಲಿರುವ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸಲು ತಾಲ್ಲೂಕು ಆಡಳಿತ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದ ದಾಸೋಹ ಭವನದಲ್ಲಿ ಮಂಗಳವಾರ ಗ್ರಾಮದೇವತೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇದು ಸಾರ್ವತ್ರಿಕವಾಗಿ ಎಲ್ಲ ಧರ್ಮೀಯರು ಸೇರಿಕೊಂಡು ಮಾಡುವ ಜಾತ್ರೆಯಾಗಿದ್ದು ಸರ್ಕಾರ ಎಂದರೆ ಸಾರ್ವಜನಿಕರು, ಸಾರ್ವಜನಿಕರೆಂದರೆ ಸರ್ಕಾರ ಇದ್ದಂತೆ. ಅಧಿಕಾರಿಗಳು ಜಾತ್ರಾ ಕಮೀಟಿಯವರು ತಿಳಿಸುವ ಕೆಲಸಗಳನ್ನು ಲೋಪವಾಗದಂತೆ ಮಾಡಿಕೊಡಬೇಕು ಎಂದು ತಿಳಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ ಪಟ್ಟಣದ ಸ್ವಚ್ಛತೆಗೆ ಮುಖ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಗಮನ ಹರಿಸಬೇಕು. ಆಯ್ದ ಜಾಗೆಗಳಲ್ಲಿ ಚರಂಡಿಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಬೇಕು. ಕುಡಿವ ನೀರು ಪೂರೈಕೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಬೇಕು. ಮೊಬೈಲ್ ಟಾಯ್ಲೆಟ್ ತೆರೆಯಬೇಕು ಎಂದು ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರಿಗೆ ತಿಳಿಸಿದರು.
ಜಾತ್ರೆಗೆ ಸಾವಿರಾರು ಜನ ಆಗಮಿಸುವುದರಿಂದ ಸಂಚಾರದ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಸಾಧ್ಯವಾದರೆ ಜಾತ್ರೆಯಲ್ಲಿ ಒಂದು ತಾತ್ಕಾಲಿಕ ಪೊಲೀಸ್ ಚೌಕಿ ಆರಂಭಿಸಬೇಕು. ಜಾತ್ರೆಯ ಹಿಂದಿನ ದಿನದಿಂದ ಜಾತ್ರೆ ಮುಗಿಯವರೆಗೂ ಏಕಮುಖ ಸಂಚಾರ ಮುಖ್ಯರಸ್ತೆಯಲ್ಲಿ ಕೈಗೊಳ್ಳಬೇಕು. ಬಸವೇಶ್ವರ ವೃತ್ತ ಹಾಗೂ ಇಂದಿರಾ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ಭಾರಿ ಪ್ರಮಾಣದ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ಸಿಪಿಐ ಮೊಹ್ಮದ ಫಸೀವುದ್ದೀನ, ಪಿಎಸ್‌ಐ ಸಂಜಯ ತಿಪರೆಡ್ಡಿ ಅವರಿಗೆ ಸೂಚಿಸಿದರು.
ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ಒದಗಿಸುವ ಮಳಿಗೆಗಳನ್ನು ಹಾಕಿ ಅಲ್ಲಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯಿಂದ ಹೆಲ್ತ್ ಕ್ಯಾಂಪ್ ಹಾಗೂ ತಾತ್ಕಾಲಿಕ ಸಂಚಾರಿ ಕ್ಲಿನಿಕ್ ತೆರೆಯಬೇಕು, ಕುಡಿವ ನೀರು ಆಹಾರದ ಗುಣಮಟ್ಟದ ಕುರಿತು ಗಮನ ಹರಿಸುವಂತೆ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಅವರಿಗೆ ಸೂಚಿಸಿದರು.
ಅಬಕಾರಿ ಇಲಾಖೆಯವರು ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಅವಕಾಶ ಕೊಡಬೇಡಿ. ಜನರು ನಶೆಯಲ್ಲಿ ತೇಲಾಡಿಸುವುದನ್ನು ಕಡಿಮೆ ಮಾಡಿ. ಬಾರ್ ಅಂಗಡಿಗಳ ಸಮಯವನ್ನು ಬೆಳಗ್ಗೆ 10 ರಿಂದ ಸಂಜೆ 6ಕ್ಕೆ ಮುಚ್ಚಿಸಲು ಕ್ರಮ ಕೈಗೊಳ್ಳಿ. ತಾಂಡಾಗಳಿಂದ ಕಳ್ಳಬಟ್ಟಿ ಮಾರಾಟ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ ಮೇತ್ರಿ ಅವರಿಗೆ ಸೂಚಿಸಿದರು.
ಹೆಸ್ಕಾಂನಿಂದ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಸುರಕ್ಷತೆಯ ದೃಷ್ಟಿಯಿಂದ ಅಗ್ನಿಶಾಮಕ, ಹೆಸ್ಕಾಂನವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೆಸ್ಕಾಂ ಎಇಇ ಆರ್. ಎನ್. ಹಾದಿಮನಿ ಅವರಿಗೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೃಷಿ, ತೋಟಗಾರಿಕೆ, ಆರೋಗ್ಯ, ಶಿಶು ಅಭಿವೃದ್ಧಿ, ಪೊಲೀಸ್, ಸಾರಿಗೆ ಸೇರಿದಂತೆ ಹಲವು ಇಲಾಖೆಗಳಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಯಿತು. ಅಲ್ಲದೇ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಿಳಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಾತ್ರಾ ಕಮೀಟಿ ಮುಖಂಡ ಪ್ರಭುರಾಜ ಕಲ್ಬುರ್ಗಿ, ವಕೀಲರ ಸಂಘದ ಅಧ್ಯಕ್ಷ ಎಸ್. ಎಸ್. ಮಾಲಗತ್ತಿ, ಸತೀಶ ಓಸ್ವಾಲ್, ಗಣ್ಯರಾದ ಬಾಬು ಬಿರಾದಾರ, ಮಾಜಿ ಸೈನಿಕ ರಾಚಯ್ಯ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ, ವಾಯ್. ಎಚ್. ವಿಜಯಕರ್, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಗಣ್ಯ ವರ್ತಕ ಬಿ.ಸಿ.ಮೋಟಗಿ, ತಾಪಂ ಇಒ ನಿಂಗಪ್ಪ ಮಸಳಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಎಸ್. ಡಿ. ಭಾವಿಕಟ್ಟಿ, ಆರ್. ಎಸ್. ಹಿರೇಗೌಡರ, ಸಂತೋಷ ದೇಶಪಾಂಡೆ ಮೊದಲಾದವರು ಸೇರಿದಂತೆ ಊರಿನ ನಾಗರಿಕರು, ಜಾತ್ರಾ ಕಮೀಟಿ ಪದಾಧಿಕಾರಿಗಳು ಇದ್ದರು. ಸಿ.ಟಿ.ಕಲಾಲ ನಿರೂಪಿಸಿದರು.
ಶಾಸಕ ನಾಡಗೌಡರಿಗೆ ಮಂಡಿನೋವು :
ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ನಾಡಗೌಡರಿಗೆ ಮಂಡಿನೋವು ಕಾಣಿಸಿಕೊಂಡಿತು. ಈ ವೇಳೆ ತಮ್ಮ ಆಪ್ತ ಸಹಾಯಕ ಮಲ್ಲಿಕಾರ್ಜುನ ಬಾಗೇವಾಡಿ ಅವರಿಗೆ ನೋವುನಿವಾರಕ ಔಷಧ ತರುವಂತೆ ತಿಳಿಸಿದ ಅದನ್ನು ಮೊಣಕಾಲಿಗೆ ನಾಡಗೌಡರು ಹೊಡೆದುಕೊಂಡು ಅರ್ಧ ಗಂಟೆಯವರೆಗೆ ಅಧಿಕಾರಿಗಳಿಗೆ, ಕಮೀಟಿಯವರಿಗೆ, ಊರಿನ ನಾಗರಿಕರಿಗೆ ಜಾತ್ರೆ ಯಶಸ್ವಿಗೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.