ಮುದ್ದೇಬಿಹಾಳ : ಹಿಂದಿನ ಬಿಜೆಪಿ ಸರ್ಕಾರ ಬಾಕಿ ಇರಿಸಿದ್ದ ಬಿಲ್‌ದಲ್ಲಿ ಶೇ.60ರಷ್ಟು ಕಾಂಗ್ರೆಸ್ ಸರ್ಕಾರ ಕಳೆದ ಮಾರ್ಚ್ನಲ್ಲಿ ಗುತ್ತಿಗೆದಾರರಿಗೆ ಪಾವತಿಸಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಸಿ.ಬಿ.ಅಸ್ಕಿ ಹೇಳಿದರು.
ಪಟ್ಟಣದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮಂಗಳವಾರ ಆಗಮಿಸಿದ್ದ ಸಮಯದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಬಿಜೆಪಿ ಸರ್ಕಾರ ಅವಧಿಯಲ್ಲಿ 2 ಲಕ್ಷ ಕೋಟಿ ರೂ.ಬಾಕಿ ಉಳಿಸಿಕೊಂಡು ಹೋಗಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಕೆಲಸ ಆಗಿದೆ. ಇನ್ನುಳಿದ ಶೇ. 30-40ರಷ್ಟು ಬಾಕಿ ಬಿಲ್ಲಗಳನ್ನು ಸರ್ಕಾರ ಶೀಘ್ರವೇ ಪಾವತಿಸಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಗುತ್ತಿಗೆದಾರರು ಬಿಲ್ ಪಾವತಿಯಾಗಿಲ್ಲ ಎಂದು ಪ್ರತಿಭಟನೆ ನಡೆಸಿದ್ದರಲ್ಲ. ಬಾಕಿ ಪಾವತಿಸುತ್ತಿದ್ದರೆ ಸರ್ಕಾರದ ವಿರುದ್ಧ ಗುತ್ತಿಗೆದಾರರೇಕೆ ಪ್ರತಿಭಟನೆ ನಡೆಸುತ್ತಿದ್ದರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರು ತಿಂಗಳಲ್ಲಿ ಬಾಕಿ ಬಿಲ್ಲುಗಳನ್ನು ಪಾವತಿಸುವುದಾಗಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ ವಿಜಯಪುರಕ್ಕೆ ಬಂದಾಗ ತಿಳಿಸಿದ್ದಾರೆ ಎಂದು ಹೇಳಿದರು.