ಮುದ್ದೇಬಿಹಾಳ : ಪಟ್ಟಣದ ತಾಲ್ಲೂಕು ಪಂಚಾಯತಿ ಕ್ವಾರ್ಟರ್ಸ್ನಲ್ಲಿರುವ ಗ್ರಾಮದೇವತೆ ವೇದಿಕೆಯಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.
ಸಂಘಟಕರ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ ಕಾರ್ಯಕ್ರಮಕ್ಕೆಂದು ಹಾಕಿದ್ದ ಎಲ್‌ಇಡಿ ಪರದೆಗಳ ಸಂಪರ್ಕ ಕಡಿತಗೊಂಡಿತು. ಅಲ್ಲದೇ ಕೆಲವರು ಜನರೇಟರ್ ಮೇಲೆ ಹತ್ತಿ ಕೂತಿದ್ದರಿಂದ ಕಾರ್ಯಕ್ರಮವನ್ನು ಎರಡು ಬಾರಿ ಮುಂದೂಡಿ ಮತ್ತೆ ಆರಂಭಿಸಲಾಯಿತು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸಮೀತಿಯ ಪ್ರಮುಖರಾದ ನೇತಾಜಿ ನಲವಡೆ, ಸಂಗಮೇಶ ನಾಲತವಾಡ, ಸಿದ್ಧರಾಜ ಹೊಳಿ ಮೊದಲಾದವರು ದಾಂಧಲೆ ಎಬ್ಬಿಸುತ್ತಿದ್ದವರಿಗೆ ಹಲವು ಬಗೆಯಲ್ಲಿ ತಿಳಿ ಹೇಳಿದರು.
ಕಮೀಟಿಯವರ ಮಾತು ಕೇಳದೇ ಗದ್ದಲ ಮುಂದುವರೆದಾಗ ಅನಿವಾರ್ಯವಾಗಿ ಪೊಲೀಸರು ಲಘುವಾಗಿ ಗುಂಪಿನತ್ತ ಲಾಠಿ ಬೀಸಿದರು. ಇದರಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಪಿಎಸ್‌ಐ ಸಂಜಯ ತಿಪರೆಡ್ಡಿ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ ಬಳಿಕ ಕಾರ್ಯಕ್ರಮ ಯಥಾಸ್ಥಿತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನವಯುಗದ ಜಾನಪದ ಡಿಜೆ ಗಾಯಕರಾದ ಮ್ಯೂಜಿಕ್ ಮೈಲಾರಿ, ಮಾಳು ನಿಪನಾಳ, ಮುತ್ತು ಹಳಿಯಾಳ, ಲಕ್ಷ್ಮಿ ವಿಜಯಪುರ, ಸುದೀಪ ಹೆಳವರ, ತೃಪ್ತಿ ಧಾರವಾಡ, ಸಂಜನಾ, ಪರಸು ಕೋಲೂರ ಮೊದಲಾದವರು ನೆರೆದಿದ್ದ ಜನರಿಗೆ ತಮ್ಮದೇ ಶೈಲಿಯಲ್ಲಿ ರಚಿಸಿದ ಹಾಡುಗಳನ್ನು ಹಾಡಿ ರಂಜಿಸಿದರು.
ಗ್ಯಾರಂಟಿ ಸಮೀತಿ ಸದಸ್ಯ ಸಂಗಣ್ಣ ಮೇಲಿನಮನಿ ತಮ್ಮ ಜೇಬಿನಿಂದ ಐದು ನೂರು ರೂ.ಕೊಟ್ಟು ಹಳೆಯ ಕಾಲದ ಬಾಳ ಬಂಗಾರ ನೀನು, ಮನೆಯ ಸಿಂಗಾರ ನೀನು ಹಾಡನ್ನು ಜಾನಪದ ಕಲಾವಿದರಿಂದ ಹಾಡಿಸಿದ್ದು ಗಮನ ಸೆಳೆಯಿತು. ಸ್ಥಳೀಯ ಕಲಾವಿದರಾದ ಶ್ರೀಶೈಲ ಹೂಗಾರ, ಗೋಪಾಲ ಹೂಗಾರ, ಚಂದ್ರು ಕಲಾಲ ಮೊದಲಾದವರು ವೇದಿಕೆ ನಿರ್ವಹಣೆ ಮಾಡಿದರು. ಸುಮಾರು 20 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಮಧ್ಯರಾತ್ರಿ 2 ಗಂಟೆಯವರೆಗೂ ಕಾರ್ಯಕ್ರಮ ನಡೆಯಿತು. ಕೆಲವರು ಪುರಸಭೆಯ ಹಳೆಯ ಕಾಲದ ಮಳಿಗೆಗಳ ಶಿಥಿಲ ಛಾವಣಿ ಮೇಲೆ ಕೂತು ಸಂಘಟಕರಿಗೆ ಆತಂಕವನ್ನುಂಟು ಮಾಡಿದ ಪ್ರಸಂಗವೂ ನಡೆಯಿತು.