ಮುದ್ದೇಬಿಹಾಳ : ಬೇಸಿಗೆಯ ಧಗೆಯಲ್ಲಿ ಪ್ರಾಣಿ ಪಕ್ಷಿಗಳು ಕುಡಿಯುವ ನೀರು, ಆಹಾರ ಇಲ್ಲದೇ ಬಹಳ ಸಂಕಷ್ಟ ಎದುರಿಸುತ್ತವೆ. ನಾಗರಿಕರು ಇದನ್ನು ಅರಿತು ತಮ್ಮ ಮನೆಯ ಮುಂದೆ ಕಾಂಪೌOಡ್, ಮಾಳಿಗೆಯ ಮೇಲೆ, ಗಿಡಗಳಲ್ಲಿ ನೀರಿನ ಸೌಲಭ್ಯ ಕಲ್ಪಿಸುವ ಮಾನವೀಯ ಕೆಲಸ ಮಾಡಬೇಕೆಂದು ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ ಮನವಿ ಮಾಡಿದರು.
ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ಶುಕ್ರವಾರ ವಿಶ್ವ ಗುಬ್ಬಚ್ಚಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರು ತಮ್ಮ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬದ ಸಮಯದಲ್ಲಿ ದುಂದುವೆಚ್ಚ ಮಾಡುವುದರ ಬದಲು ಪರಿಸರ ಪ್ರೀತಿಯ ಗಿಡಗಳ ನೆಡುವಿಕೆ ಮಾಡಬೇಕೆಂದರು.
ಹಸಿರು ತೋರಣ ಬಳಗದ ಅಧ್ಯಕ್ಷ ಅಮರೇಶ ಗೂಳಿ ಮಾತನಾಡಿ, ಪ್ರತೀ ವರ್ಷವೂ ನಮ್ಮ ಬಳಗವು ಪಕ್ಷಿ ಸಂಕುಲ ಉಳಿಸಲು ಗುಬ್ಬಚ್ಚಿಗಳ ದಿನಾಚರಣೆ ಮಾಡುತ್ತಿದ್ದೇವೆ ಎಂದರು. ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಗುಬ್ಬಚ್ಚಿಗಳು ರೈತನ ಮಿತ್ರರು. ಪರಿಸರದ ಸಮತೋಲನ ಕಾಪಾಡುವ ಕೆಲಸವನ್ನು ಪಕ್ಷಿಗಳು ಮಾಡುತ್ತವೆ. ನಮ್ಮ ಮನೆಗಳಲ್ಲಿ ಪಕ್ಷಿಗಳಿಗೆ ನೀರು ಇಡುವ, ಆಹಾರ ಧಾನ್ಯ ಕೊಡುವ ಕೆಲಸ ಮಾಡಬೇಕೆಂದರು.
ಬಳಗದ ಮಾಜಿ ಅಧ್ಯಕ್ಷ ರವಿ ಗೂಳಿ ಮಾತನಾಡಿ, ಪ್ರಾಣಿ ಪಕ್ಷಿಗಳಿಗೂ ಈ ಭೂಮಿಯ ಮೇಲೆ ಜೀವಿಸುವ ಹಕ್ಕಿದ್ದು ಅವುಗಳ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಚ್.ವೈ.ಪಾಟೀಲ, ಡಾ.ವೀರೇಶ ಇಟಗಿ ಮಾತನಾಡಿದರು.
ಬಳಗದ ಕಾರ್ಯದರ್ಶಿ ಬಸವರಾಜ ಬಿಜ್ಜೂರ, ಉಪಾಧ್ಯಕ್ಷ ವಿಲಾಸರಾವ್ ದೇಶಪಾಂಡೆ, ಗೌರವಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ಬಿ.ಎಸ್.ಮೇಟಿ, ರಾಜಶೇಖರ ಕಲ್ಯಾಣಮಠ, ಬಿ.ಎಚ್.ಬಳಬಟ್ಟಿ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಜಿ.ಎಂ.ಹುಲಗಣ್ಣಿ, ಪರಶುರಾಮ ಕೂಡಗಿ, ವೀರೇಶ ಢವಳಗಿ, ವೀರೇಶ ಹಂಪನಗೌಡ್ರ, ಡಾ.ವಿಜಯಕುಮಾರ ಗೂಳಿ, ಅಮರೇಶ ಐಹೊಳೆ, ಬಿ.ಎಂ.ಪಲ್ಲೇದ, ವಿನಯ ಹಿರೇಮಠ, ಡಾ.ಚಂದ್ರಶೇಖರ ಶಿವಯೋಗಿಮಠ, ಮಹೇಶ ಕೆಂದೂಳಿ, ವಿರುಪಾಕ್ಷಿ ಪತ್ತಾರ, ಪ್ರೀತಮ ಕೆಂದೂಳಿ ಮತ್ತಿತರರು ಇದ್ದರು. ಬಳಗದ ಕಾರ್ಯದರ್ಶಿ ಬಸವರಾಜ ಬಿಜ್ಜೂರ ವಂದಿಸಿದರು.







