ವಯನಾಡ್ : ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಮತ್ತು ಚುರಲ್ಮಾಲಾ ಬಳಿ ಮಂಗಳವಾರ ಮುಂಜಾನೆ ಭೂಕುಸಿತ ಸಂಭವಿಸಿದ್ದು, ಅಪಘಾತದಲ್ಲಿ 63 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರವೇ ಖಚಿತ ಪಡಿಸಿದೆ.
ಕಲ್ಲುಗಳು ಮತ್ತು ಮಣ್ಣಿನ ಗುಂಡಿಗಳ ಅಡಿಯಲ್ಲಿ ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದ್ದು, ಮುಂಡಕ್ಕೈ, ಚುರಲ್ಮಾಲಾ, ಅತ್ತಮಾಲಾ ಮತ್ತು ನುಲುಪ್ಪುಳ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಈವರೆಗೆ 116 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈವರೆಗೆ ಸುಮಾರು 101 ಜನರನ್ನು ರಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.
ಮಂಗಳವಾರ ಮುಂಜಾನೆ 2 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಸಹಾಯಕ ಸಿಬ್ಬಂದಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಎಷ್ಟು ಜನರು ಸಿಕ್ಕಿಬಿದ್ದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕೇರಳ ಅರಣ್ಯ ಸಚಿವ ಶಶೀಂದ್ರನ್ ತಿಳಿಸಿದ್ದಾರೆ.
ಅಪಘಾತದ ಸ್ಥಳಕ್ಕೆ ಹೋಗುವ ಮಾರ್ಗಗಳಲ್ಲಿನ ಸೇತುವೆಯೂ ಭೂಕುಸಿತಕ್ಕೆ ಒಳಗಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಶಶೀಂದ್ರನ್ ಹೇಳಿದ್ದಾರೆ.