ಮುದ್ದೇಬಿಹಾಳ : ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜ.೮ ರಂದು ನಡೆಯಲಿದೆ.
ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.ಹಿಂದಿನ ಅಧ್ಯಕ್ಷ ಸತೀಶ ಓಸ್ವಾಲ ಈಗಾಗಲೇ ಎರಡು ಬಾರಿ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದು ಸಾಮಾನ್ಯ ನಿರ್ದೇಶಕರಾಗಿ ಮುಂದುವರೆಯುವ ಸಾಧ್ಯತೆ ಇದೆ.
ಡಿಸಿಜಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅಧ್ಯಕ್ಷನಾಗಬೇಕು ಎಂಬ ಆಸೆ ಇಲ್ಲ.ಊರಿನ ಹಿರಿಯರು ಈಗಾಗಲೇ ನನ್ನನ್ನು ಬ್ಯಾಂಕಿನ ಎರಡು ಅವಧಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಹಿರಿಯರ ಮಾತಿಗೆ ತಲೆಬಾಗಿ ಮುನ್ನಡೆಯುತ್ತೇನೆ ಎಂದು ಉತ್ತರಿಸಿದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಸಂಗನಗೌಡ ಬಿರಾದಾರ(ಜಿಟಿಸಿ), ರಾಜಶೇಖರ ಕರಡ್ಡಿ ಹಾಗೂ ಪ್ರಭುರಾಜ ಕಲ್ಬುರ್ಗಿ ಇದ್ದಾರೆ.ಈ ಮೂವರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.ಆದರೆ ಆಯ್ಕೆಯ ಜವಾಬ್ದಾರಿ ಹೊತ್ತಿರುವ ಹಿರಿಯರೊಬ್ಬರು, ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ.ಚುನಾವಣೆಯ ದಿನದಂದು ಬೆಳಗ್ಗೆ ಎಲ್ಲರ ಅಭಿಪ್ರಾಯ ಪಡೆದುಕೊಂಡು ಸರ್ವರ ಸಮ್ಮತಿಯೊಂದಿಗೆ ಸೂಕ್ತ ವ್ಯಕ್ತಿಗೆ ಅಧ್ಯಕ್ಷರಾಗಲು ಸೂಚಿಸುವ ಬಯಕೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಮೂವರಲ್ಲಿ ಇಬ್ಬರಿಗೆ ಅಧ್ಯಕ್ಷ ಹುದ್ದೆಯ ಅವಧಿಯನ್ನು ಎರಡು ಅವಧಿಗೆ ವಿಭಜಿಸಿ ನೀಡುವ ಮೂಲಕ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಲಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ.ಸಹಕಾರಿ ಕ್ಷೇತ್ರದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ,ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕರೂ ಆಗಿರುವ ಸತೀಶ ಓಸ್ವಾಲ್ ಅವರು ಬ್ಯಾಂಕಿಗೆ ಮಾರ್ಗದರ್ಶಕರಾಗಿರಲಿದ್ದು ಹೊಸಬರನ್ನು ಆಯ್ಕೆ ಮಾಡುವಲ್ಲಿ ಅವರ ಮಾತಿಗೂ ಪ್ರಾಶಸ್ತö್ಯ ಇರಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಒಂದು ತಿಂಗಳು ನಡೆದ ಚುನಾವಣೆಯ ಕೊನೆಯ ಘಟ್ಟ ತಲುಪಿದ್ದು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮೂಲಕ ನಾಳೆ ತೆರೆ ಬೀಳಲಿದೆ.
ಮಹಿಳೆಯರ ಆಯ್ಕೆಯಾಗಿಲ್ಲ :
ಬ್ಯಾಂಕಿನ ಇತಿಹಾಸದಲ್ಲಿ ಈವರೆಗೂ ಮಹಿಳೆಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿಲ್ಲ.ಅಧ್ಯಕ್ಷ ಹುದ್ದೆ ಇರಲಿ, ಕೊನೆಯ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕಾದರೂ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿವೆ.ಒಟ್ಟಾರೆ ಹಿರಿಯರು ಕೈಗೊಳ್ಳುವ, ಆಯ್ಕೆಯಾದ ನಿರ್ದೇಶಕರ ಸಮ್ಮತಿಯಂತೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.