ಮುದ್ದೇಬಿಹಾಳ : ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಪೌರಕಾರ್ಮಿಕರ ಸಂಘದ ವತಿಯಿಂದ ಇಲ್ಲಿನ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪುರಸಭೆ ಎದುರಿಗೆ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಸಂಘದ ಉಪಾಧ್ಯಕ್ಷ ರಾಮು ಹಂಗರಗಿ ಮಾತನಾಡಿ, ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಹಾಗೂ ಕೆ.ಜಿ.ಐ.ಡಿ., ಜಿ.ಪಿ.ಎಫ್., ಜ್ಯೋತಿ ಸಂಜೀವಿನಿ, ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. ಸುಮಾರು 25-30 ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿಗಳು, ಲೋಡರ್ಸ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್ ಪೌರಕಾರ್ಮಿಕರು, ಸೂಪರ್ ವೈಸರ್ಸ್, ಕಂಪ್ಯೂಟರ್ ಆಪರೇಟರಗಳು, ಜ್ಯೂನಿಯರ್ ಪ್ರೋಗ್ರಾಸ್ ಸಿಬ್ಬಂದಿಗಳನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಕುಡಿವ ನೀರು ಪೂರೈಕೆ ವಿಭಾಗದ ಶಿವಣ್ಣ ಬೋಳಿ ಮಾತನಾಡಿ, ಕುಡಿವ ನೀರುಪೂರೈಕೆ ಯತಾಸ್ಥಿತಿಯಲ್ಲಿರಲಿದ್ದು ಇನ್ನುಳಿದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಿವಪ್ಪ ಅಜಮನಿ, ಬಸಪ್ಪ ಚಲವಾದಿ, ಸಾಬಣ್ಣ ಚಲವಾದಿ, ಶರಣಪ್ಪ ಮೂಕಿಹಾಳ, ಪರಸಪ್ಪ ಚಲವಾದಿ, ಬಸಪ್ಪ ಚಲವಾದಿ, ಸಂತೋಷ್ ಚಲವಾದಿ, ಬಸವರಾಜ್ ಚಲವಾದಿ, ವಿಶ್ವನಾಥ್ ಅಜಮನಿ, ರೇಣುಕಾ ಚಲವಾದಿ, ಯಲ್ಲವ ಚಲವಾದಿ, ರೇಣುಕಾ ವಡವಡಗಿ, ಸತ್ಯವ್ವ ದೊಡಮನಿ ಇದ್ದರು.