ಮುದ್ದೇಬಿಹಾಳ : ಗುರುಗಳೇ ಇಲ್ಲದಿದ್ದರೆ ನಮ್ಮ ಬದುಕು ಕತ್ತಲೆ ಆಗುತ್ತದೆ. ಕಲಿಸಿದ ಗುರುಗಳಿಂದಲೇ ನಾವು ಮಾತನಾಡುವಂತಾಗಿದೆ.ದೊಡ್ಡ ಸ್ಥಾನಕ್ಕೆ ಏರಿದರೂ ಗುರುಗಳನ್ನು ಮರೆಯಬಾರದು ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.
ಪಟ್ಟಣದ ಪದ್ಮಾವತಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ 1985-86ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ನೇಹಸಿರಿ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗುರುಗಳು ತಾಯಿ ಸಮಾನರು. ವಿದ್ಯಾರ್ಥಿ ಜೀವನ ಬದುಕಿನ ಬಂಗಾರದ ಲಕ್ಷಣಗಳು ಇದ್ದು ಯಾರಿಂದ ಮೇಲೆ ನಾವು ಏರಿದ್ದೇವು ಅದನ್ನು ಮರೆಯಬಾರದು ಎಂದರು.
ನಿವೃತ್ತ ಶಿಕ್ಷಕ ಎಸ್.ಬಿ.ಕನ್ನೂರ ಮಾತನಾಡಿ, ಮುದ್ದೇಬಿಹಾಳದಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿದ್ದಕ್ಕೆ ನಮಗೆ ಹೆಮ್ಮೆ ಇದೆ.ನಮ್ಮ ಕೈಯ್ಯಲ್ಲಿ ಓದಿದವರು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಲವರು ಸೇವೆಯಲ್ಲಿದ್ದಾರೆ. ಆದರೆ ದೊಡ್ಡ ಹುದ್ದೆಯಲ್ಲಿದ್ದರೂ ಮಾನವೀಯ ಗುಣಗಳನ್ನು ಬಿಟ್ಟಿಲ್ಲ. ಇಂದಿನವರು ಆ ಗುಣಗಳನ್ನು ಅಳವಡಿಸಿಕೊಳ್ಳಬೇಕು. ದಾನ,ದಯೆ,ಮಾನವೀಯ ಗುಣಗಳನ್ನು ಪಾಲಿಸಬೇಕು ಎಂದರು.
ಬೆಂಗಳೂರಿನ ಚೌಧರಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಡಾ.ಗೌತಮ್ ಚೌಧರಿ ಮಾತನಾಡಿ, ಯುವ ಜನಾಂಗ ಶಿಕ್ಷಕರಿಗೆ ಗೌರವ ಕೊಡುವುದನ್ನು ಮರೆತಿದೆ.ಅದಕ್ಕೆ ಸಾಮಾಜಿಕ ಮಾಧ್ಯಮಗಳೂ ಕಾರಣ.ವಿದ್ಯಾರ್ಥಿಗಳಿಗೆ ತಪ್ಪು ಮಾಡಿದಾಗ ಶಿಕ್ಷಕರು ಕೊಡುವ ಶಿಕ್ಷೆಯನ್ನೇ ದೊಡ್ಡದನ್ನಾಗಿ ಬಿಂಬಿಸಲಾಗುತ್ತದೆ. ಗುರು ಹಿರಿಯರಿಗೆ, ಶಿಕ್ಷಕರಿಗೆ, ಹೆತ್ತವರಿಗೆ ಗೌರವ ಕೊಡುವ ಕಾರ್ಯ ಆಗಬೇಕು. ನಾನು ಓದಿದ ಅವಧಿಯಲ್ಲಿ ತಮಗೆ ಕಲಿಸಿದ ಶಿಕ್ಷಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಜಿ.ಆರ್.ನಾವದಗಿ,ಎ.ಎಸ್.ಬಳೂರಗಿ, ಎಸ್.ಎಲ್.ಗುರವ, ಕೆ.ಪಿ.ಹಿರೇಮಠ, ಎ.ಸಿ.ಹಿರೇಮಠ, ಬಿ.ಕೆ.ಪಾಟೀಲ್, ಪಾಂಡುರಂಗ ಕೊರ್ತಿ,ಅಂದಾನೆಪ್ಪ ಚಿನಿವಾರ, ಬಿ.ವಾಯ್.ದಾಸರ, ಬಸವರಾಜ ನಾಶಿ, ಎಚ್.ಎಂ.ನಾಟೀಕಾರ, ಬಿ.ಜಿ.ಸಜ್ಜನ, ಸಿ.ಎಂ.ಕಾರಜೋಳ ಮೊದಲಾದವರನ್ನು ಸನ್ಮಾನಿಸಲಾಯಿತು.
ವಿಶೇಷ ಸಾಧನೆ ತೋರಿದ ಬಳಗದ ಸದಸ್ಯರಾದ ಸುಧೀರಸಿಂಗ ಬಿಜಾಪೂರ, ಸೋಮನಾಥ ಸೂಳಿಭಾವಿ, ಡಾ.ಗೌತಮ ಚೌಧರಿ,ವೆಂಕನಗೌಡ ಪಾಟೀಲ,ನಿಂಗಪ್ಪ ಚಟ್ಟೇರ,ಉಮೇಶ ಕಂಠಿ,ಬುರಾನ್ ರುದ್ರವಾಡಿ,ಮೋಹನ ಹಂಚಾಟೆ, ಸದಾನಂದ ಬುಡ್ಡರ ಮೊದಲಾದವರನ್ನು ಗೌರವಿಸಲಾಯಿತು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು.ಬುರಾನಸಾಬ ರುದ್ರವಾಡಿ ಕಾರ್ಯಕ್ರಮ ನಿರ್ವಹಿಸಿದರು.