ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ 50 ಸಾವಿರ ರೂ.ಗಳಿಂದ ಗರಿಷ್ಠ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಾನಂದ ಪಿ. ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶುಕ್ರವಾರ ನಡೆದ ಸಿಡ್ಬಿ ಸಮೃದ್ಧಿ ಯೋಜನೆಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಗಾಗಿ 1982ರಲ್ಲಿ ಆರಂಭವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಉದ್ಯಮಗಳಿಗೆ ಆರ್ಥಿಕ ಉತ್ತೇಜನ ನೀಡುವ ಉದ್ದೇಶದಿಂದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ) ಜತೆ ಒಪ್ಪಂದ ಮಾಡಿಕೊಂಡಿದೆ. ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರು ಹಾಗೂ ಈಗಾಗಲೇ ಉದ್ಯಮ ನಡೆಸುತ್ತಿರುವವರು ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದು ಎಂದರು.
ಸಿಡ್ಬಿ ಸಮೃದ್ಧಿ (ಪ್ರಯಾಸ್) ಯೋಜನೆಯಡಿ ಸ್ವಯಂ ಉದ್ಯೋಗ, ಕಿರು ಉದ್ಯಮ ಹಾಗೂ ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೆ ₹50 ಸಾವಿರದಿಂದ ಗರಿಷ್ಠ ₹5 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಫಲಾನುಭವಿಯ ಅರ್ಹತೆ, ಉದ್ಯಮದ ಅಗತ್ಯ ಹಾಗೂ ಸಂಸ್ಥೆಯ ನಿಯಮಗಳ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರವಾಗಲಿದೆ. ಪ್ರತಿಯೊಬ್ಬರಿಗೂ ಗರಿಷ್ಠ ₹5 ಲಕ್ಷ ಸಾಲ ದೊರೆಯುತ್ತದೆ ಎಂಬುದಿಲ್ಲ ಎಂದು ತಿಳಿಸಲಾಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ಪತ್ರಕರ್ತ ಶೇಖ್ ಲಾಡ್ಲೆಮಶ್ಯಾಕ ನದಾಫ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ.ಕೆರೆಗಳ ಸ್ವಚ್ಛತೆ, ಬಡವರ ಮನೆ ನಿರ್ಮಾಣಕ್ಕೆ ನೆರವು, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಯೋಜನೆಯ ವತಿಯಿಂದ ಕೈಗೊಳ್ಳಲಾಗುತ್ತಿದೆ. ಇಂತಹ ಜನಪರ ಕಾರ್ಯಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಯೋಜನೆಯ ಹಣಕಾಸು ಪ್ರಬಂಧಕ ಮನೋಹರ ಅವರು ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು, ಅರ್ಹತೆ, ಸಾಲ ಪಡೆಯುವ ಪ್ರಕ್ರಿಯೆ, ಅನ್ವಯಿಸುವ ಬಡ್ಡಿದರ ಹಾಗೂ ಇತರ ಶುಲ್ಕಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಿದರೆ, ಸಭೆಯ ಅಧ್ಯಕ್ಷತೆ ವಹಿಸಿದ್ದ ಸದಾನಂದ ಅವರು, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಮೇಲ್ವಿಚಾರಕ ಲಾಯಪ್ಪ ನಂದ್ಯಾಳ, ಸಿಬ್ಬಂದಿ ಮಹಾಂತೇಶ, ಸಂಗೀತ, ವಿಶ್ವನಾಥ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.







