ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ ನೀಡಲಾಗಿದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಮುದ್ದೇಬಿಹಾಳ ,ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡುತ್ತಿಲ್ಲ.ರೈತರು ಸಂಕಷ್ಟದಲ್ಲಿದ್ದು ಅವರಿಗೆ ಬೆಂಬಲಿಸಲು, ಸರ್ಕಾರದ ಮೇಲೆ ಒತ್ತಡ ಹೇರಲು ಈ ಬಂದ್ ಆಚರಿಸಲಾಗುತ್ತದೆ ಎಂದು ಹೇಳಿದರು.
ಸೆ.12 ರಂದು ಬೆಳಗ್ಗೆ 6 ಗಂಟೆಗೆ ಸಂಜೆ 6 ಗಂಟೆಯವರೆಗೆ ಎಲ್ಲ ಅಂಗಡಿ,ಮುಗ್ಗಟ್ಟುಗಳನ್ನು ಮುಚ್ಚಿ ರೈತರ ಬೆನ್ನಿಗೆ ನಿಲ್ಲುವ ಕಾರ್ಯ ಮಾಡಬೇಕು ಎಂದು ನಗರದ ವ್ಯಾಪಾರಸ್ಥರಿಗೆ ವಿನಂತಿಸಲಾಗಿದೆ.ಸಾರಿಗೆ ಸಂಚಾರ,ಶಾಲೆಗಳು ಬಂದ್ ಆಗಲಿವೆ ಎಂದು ಅವರು ತಿಳಿಸಿದ್ದಾರೆ.
ಪರಿಸ್ಥಿತಿ ನೋಡಿಕೊಂಡು ಬಸ್ ಕಾರ್ಯಾಚರಣೆ:
ಸಾರಿಗೆ ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ ಮಾತನಾಡಿ, ಮುದ್ದೇಬಿಹಾಳ ಬಂದ್ ಕರೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ನಡಹಳ್ಳಿಯವರು ಹಾಗೂ ರೈತರು ಘಟಕಕ್ಕೆ ಬಂದು ಬಸ್ ಕಾರ್ಯಾಚರಣೆ ನಡೆಸದಂತೆ ವಿನಂತಿಸಿದ್ದಾರೆ.ಪೊಲೀಸರು ಕೂಡಾ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ.ಆದರೆ ನಾವು ಬೆಳಗ್ಗೆ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದನ್ನು ನೋಡಿಕೊಂಡು ವಾಹನಗಳನ್ನು ಕಾರ್ಯಾಚರಣೆ ನಡೆಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಮಾತನಾಡಿ, ಮುದ್ದೇಬಿಹಾಳ ಬಂದ್ ಕರೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ನಗರದ ಶಾಲೆಗಳಿಗೆ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಿಕೊಳ್ಳಲಾಗಿದೆ.ಮೇಲಧಿಕಾರಿಗಳು ಶಾಲೆಗಳ ರಜೆ ಬಗ್ಗೆ ಯಾವುದೇ ಆದೇಶ ನಮಗೆ ನೀಡಿಲ್ಲ.ಅಲ್ಲದೇ ಜಿಲ್ಲಾಧಿಕಾರಿಗಳು ಯಾವುದೇ ರಜೆ ಶಾಲೆಗಳಿಗೆ ನೀಡಿಲ್ಲ.ಶಾಲೆಗಳಲ್ಲಿ ಎಂದಿನoತೆ ತರಗತಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಜಿಲ್ಲಾಧಿಕಾರಿ ಡಾ.ಕೆ.ಆನಂದ ಮುದ್ದೇಬಿಹಾಳ ಬಂದ್ಗೆ ಕುರಿತಂತೆ ಸಾರಿಗೆ,ಶಾಲೆಗಳ ರಜೆ ಬಗ್ಗೆ ಪ್ರತಿಕ್ರಿಯಿಸಿದ್ದು ಸಾರ್ವಜನಿಕ ಸೇವೆಯಾಗಿರುವ ಬಸ್ ಸಂಚಾರಕ್ಕೆ ತೊಂದರೆಯಾಗದoತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ.ಶಾಲೆಗಳು ಎಂದಿನoತೆ ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.







