ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು 20.34 ಲಕ್ಷ ರೂ.ಲಾಭ ಮಾಡಿದೆ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಮನೋಹರ ಎಸ್.ಮೇಟಿ(ಬಸರಕೋಡ) ಹೇಳಿದರು.
ಪಟ್ಟಣದ ಏಪಿಎಂಸಿಯಲ್ಲಿರುವ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 69ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಆರ್ಥಿಕ ವ್ಯವಹಾರವನ್ನು ಸಭೆಗೆ ತಿಳಿಸಿದರು.
ರೈತರು ಬೆಳೆದ ಒಕ್ಕಲುತನ ಹುಟ್ಟುವಳಿ ಮಾರಾಟ ಮಾಡಿಸುವಲ್ಲಿ ಹೆಚ್ಚಿಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿದೆ.ರೈತರಿಗೆ ಸುಧಾರಿಸಿದ ಬೀಜ,ಗೊಬ್ಬರ ತಂದು ಅನುಕೂಲ ಕಲ್ಪಿಸಿದೆ ಎಂದು ಹೇಳಿದರು.ಸಂಘವು ಮುದ್ದೇಬಿಹಾಳ,ನಾಲತವಾಡ,ತಾಳಿಕೋಟೆಯಲ್ಲಿ ಶಾಖೆಗಳನ್ನು ಹೊಂದಿದ್ದು ಮೂರು ಶಾಖೆಗಳು ಲಾಭದಲ್ಲಿ ನಡೆದಿದೆ ಎಂದು ತಿಳಿಸಿದರು.
ಸಂಘದ ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ ಮಾತನಾಡಿ, ಮುದ್ದೇಬಿಹಾಳದ ಶಾಖೆಯು ಸನ್ 2025-26ರಲ್ಲಿ 8.23 ಲಕ್ಷ ರೂ.ಗಳಷ್ಟು ಗೊಬ್ಬರ ಮಾರಾಟ ಮಾಡಿದೆ.ತಾಳಿಕೋಟಿ ಶಾಖೆಯು 29,800 ರೂ.ರಷ್ಟು ಮಾರಾಟ ಮಾಡಲಾಗಿದೆ.ಸನ್ 2026-27ರಲ್ಲಿ ಮುದ್ದೇಬಿಹಾಳ ಶಾಖೆಯು 10.50 ಲಕ್ಷ, ತಾಳಿಕೋಟಿ 10.80 ಲಕ್ಷ,ನಾಲತವಾಡ ಶಾಖೆ 3.50 ಲಕ್ಷ ರೂ.ಲಾಭಾಂಶ ಮಾಡಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಬಸವರಾಜ ಇಸ್ಲಾಂಪೂರ, ಹೊಸದಾಗಿ ನಾವು ಸಂಘಕ್ಕೆ ಸದಸ್ಯರಾದ ಬಳಿಕ ಸಂಘದ ಲಾಭಾಂಶದಲ್ಲಿ ಏರಿಕೆಯಾಗಿರುವುದು ಹರ್ಷವನ್ನುಂಟು ಮಾಡಿದೆ.ರೈತರ ಪ್ರಗತಿಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸುತ್ತೇವೆ ಎಂದರು.
ಇನ್ನೋರ್ವ ನಿರ್ದೇಶಕ ಸುರೇಶ ಹಳೇಮನಿ ಮಾತನಾಡಿ, ಬರಗಾಲದ ಸಮಯದಲ್ಲಿ ರೈತರು ಸಂಘದ ಸಾಮಾನ್ಯ ಸಭೆಗಳಿಗೂ ಬರಲು ಮನಸ್ಸು ಮಾಡದಿರುವುದು ಬೇಸರವೆನಿಸುತ್ತಿದೆ.ಸಂಘದಿದ ರೈತರ ಏಳ್ಗೆಗೆ ಶ್ರಮಿಸುತ್ತೇವೆ ಎಂದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಸಂಘದ ಪ್ರಭಾರಿ ವ್ಯವಸ್ಥಾಪಕ ವಿ.ಎಸ್.ಉತ್ನಾಳ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಚಿದಾನಂದ ಸೀತಿಮನಿ,ನಿರ್ದೇಶಕರಾದ ಮಲ್ಲನಗೌಡ ಬಿರಾದಾರ,ನೀಲಕಂಠಗೌಡ ಗೌಡರ,ಗುರುಲಿಂಗಪ್ಪ ಹಡ್ಲಗೇರಿ,ಮಲ್ಲಮ್ಮ ಪಾಟೀಲ,ವನಮಾಲಾ ಮೇಟಿ,ಮುತ್ತಣ್ಣ ಮುತ್ತಣ್ಣವರ,ಗುರಣ್ಣ ಹತ್ತೂರ,ಬಸವರಾಜ ಬಗಲಿ,ಅಶೋಕ ಇಲಕಲ್,ಸಿಬ್ಬಂದಿ ಎಂ.ಎo.ಪಾಟೀಲ,ಎಸ್.ಎo.ಚೌಧರಿ,ತಾಳಿಕೋಟಿ ಸಹಾಯಕ ವ್ಯವಸ್ಥಾಪಕ ಬಿ.ಎಂ.ಬಿರಾದಾರ,ಸಿಬ್ಬoದಿ ಎಸ್.ಜಿ.ಕೊಳ್ಳಿ,ಬಿ.ಆರ್.ಇಂಗಳೇಶ್ವರ ಮತ್ತಿತರರು ಇದ್ದರು.







