ಮುದ್ದೇಬಿಹಾಳ : ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಕ್ತಿವಂತ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯುತ್ಸವ–2026 ಅನ್ನು ಇದೇ ಸೆಪ್ಟೆಂಬರ್ 15ರಂದು ಭಾದ್ರಪದ ಮಾಸದ ಮೊದಲನೇ ಮಂಗಳವಾರ ಮನೆ-ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಉತ್ತರ ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷೆ ಕಾಶಿಬಾಯಿ ರಾಂಪೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, .ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಕಳೆದ ಎಂಟು ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುವ ಪರಂಪರೆಯನ್ನು ಆರಂಭಿಸಿತ್ತು. ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಅವರ ನೇತೃತ್ವದ ಈ ಸತತ ಪ್ರಯತ್ನದಿಂದಾಗಿ, ಇಂದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಭಕ್ತರು ಏಕಕಾಲದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಬಹುಸಂಖ್ಯಾತ ಜನರಿಗೆ ವೀರಭದ್ರೇಶ್ವರ ಸ್ವಾಮಿಯೇ ಕುಲದೇವರಾಗಿದ್ದಾರೆ. ಈ ಆರಾಧನೆಯು ತನ್ನದೇ ಆದ ವಿಶಿಷ್ಟ ಪುರವಂತರು, ವೀರಗಾಸೆ ಕಲಾಪ್ರಕಾರಗಳು ಹಾಗೂ ಶ್ರೀಮಂತ ಒಡಪು ಸಾಹಿತ್ಯ ಸಂಸ್ಕೃತಿಯನ್ನು ಒಳಗೊಂಡಿರುವುದು ವಿಶೇಷತೆಯಾಗಿದೆ. ಈ ವರ್ಷ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ಹಾಗೂ ವಿಶಿಷ್ಟ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಭಕ್ತಾದಿಗಳು ತಮ್ಮ ಮನೆ ಮತ್ತು ಹಳ್ಳಿಗಳಲ್ಲಿ ಸಡಗರದಿಂದ ವೀರಭದ್ರೇಶ್ವರ ಜಯಂತಿ ಆಚರಿಸಲು ವಿನಂತಿಸಿದ್ದಾರೆ.







