ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟದ ಭಾಗವಾಗಿ ಆರನೇ ದಿನದ ಪ್ರತಿಭಟನೆಯನ್ನು ಮುದ್ದೇಬಿಹಾಳ ಬಂದ್ ಕರೆ ನೀಡುವ ಮೂಲಕ ಮುಂದುವರೆಸಲಾಗಿತ್ತು.ಬoದ್‌ಗೆ ವ್ಯಾಪಾರಸ್ಥರು,ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮುದ್ದೇಬಿಹಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಲ್ಲ ಅಂಗಡಿ ಮುಗ್ಗಟ್ಟಗಳು ಬೆಳಗ್ಗೆ 6 ಗಂಟೆಯಿAದಲೇ ಬಂದ್ ಮಾಡಲಾಗಿತ್ತು.ಜನಸಂಚಾರ ಬಿಕೋ ಎಂದಿತು.ಕೆಕೆಆರ್‌ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.ಬಂದ್ ಸಮಯದಲ್ಲಿ ಊರ ಹೊರಗಡೆ ಬಸ್‌ಗಳು ಜನರನ್ನು ಹತ್ತಿರದ ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸಲು ಒದಗಿಸುತ್ತಿದ್ದ ಬಸ್‌ಗಳು ಕಂಡು ಬರಲಿಲ್ಲ.ದೂರದ ಊರುಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಅಟೋಗಳನ್ನು ಆಶ್ರಯಿಸಿದರು.
ಮುದ್ದೇಬಿಹಾಳ ಪಟ್ಟಣದ ಮಾಂಸ,ಮದ್ಯ ಮಾರುಕಟ್ಟೆ, ಸರಾಫ್ ಬಜಾರ್.ಏಪಿಎಂಸಿ,ಕಿರಾಣಿ,ಅಡತ್ ಮರ್ಚಂಟ್,ತರಕಾರಿ,ಹಣ್ಣು ಸೇರಿದಂತೆ ಎಲ್ಲವನ್ನೂ ಬಂದ್ ಮಾಡಲಾಗಿತ್ತು.ಅನ್ನದಾತನ ಕೂಗಿಗೆ ಜನರು ಸ್ವಯಂಪ್ರೇರಣೆಯಿoದ ಬಂದ್ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು ಕಂಡು ಬಂದಿತು.ಇನ್ನುಳಿದoತೆ ಗರ್ಭಿಣಿಯರು,ಪ್ರಯಾಣಿಕರು,ಶಾಲಾ ಮಕ್ಕಳು,ಕೆಲಸಕ್ಕೆ ಹೋಗುವ ಕಾರ್ಮಿಕರು,ಶಿಕ್ಷಕರು ಬಸ್‌ಗಳ ಸಂಚಾರ ಇಲ್ಲದ್ದರಿಂದ ಪರದಾಟ ಅನುಭವಿಸಿದರು.
ಕೆಲವು ಖಾಸಗಿ ಶಾಲೆಯ ಆಡಳಿತ ಮಂಡಳಿಯುವರು ಶಾಲೆಗಳಿಗೆ ರಜೆ ಘೋಷಿಸಿ ಮಕ್ಕಳನ್ನು ವಾಪಸ್ ತಮ್ಮ ಶಾಲಾ ವಾಹನಗಳಲ್ಲಿ ಮನೆಗಳಿಗೆ ಕಳಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದು ಕಂಡು ಬಂದಿತು.ಅಟೋರಿಕ್ಷಾ ಚಾಲಕರು ಬಂದ್‌ಗೆ ಬೆಂಬಲಿಸಿದರು.ಕುಡಿಯುವುದಕ್ಕಾಗಲೀ,ತಿನ್ನುವುದಕ್ಕಾಗಲೀ ಪಟ್ಟಣದಲ್ಲಿ ಸಾರ್ವಜನಿಕರಿಗೆ ಏನೂ ಸಿಗಲಿಲ್ಲ.
ಬನಶಂಕರಿ ದೇವಸ್ಥಾನದಿಂದ ಮುಖ್ಯರಸ್ತೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಿಂದ ವಾಪಸ್ ಹಳೆ ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿ ಧರಣಿ ಆರಂಭಿಸಿದರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ,ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಎಂ.ಎಸ್.ಪಾಟೀಲ, ಎಂ.ಬಿ.ಅoಗಡಿ, ಮಲ್ಲಯ್ಯ ಬಿರಾದಾರ,ಗುರುನಾಥಗೌಡ ಬಿರಾದಾರ,ಕೆಂಚಪ್ಪ ಬಿರಾದಾರ,ಗಿರೀಶಗೌಡ ಪಾಟೀಲ,ಸಂಗು ಹತ್ತಿ,ಲಕ್ಷö್ಮಣ ಬಿಜ್ಜೂರ,ಸಂಗಮ್ಮ ದೇವರಳ್ಳಿ,ಗೌರಮ್ಮ ಹುನಗುಂದ,ಶಿವು ಕನ್ನೊಳ್ಳಿ,ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ಮಲ್ಲಿಕಾರ್ಜುನ ತಂಗಡಗಿ,ಹರೀಶ ನಾಟೀಕಾರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಬಂದ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಸಿಪಿಐ ಮೊಹ್ಮದಫಸಿವುದ್ದೀನ ,ಪಿಎಸ್‌ಐ ವಿಜಯಕುಮಾರ ತಳವಾರ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.
ಸಾರಿಗೆ ಘಟಕದಲ್ಲಿ ಜಟಾಪಟಿ: ಹಳೇ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನಾ ನಿರತರು ಧರಣಿ ನಡೆಸುತ್ತಿದ್ದಾಗ ಅತ್ತ ಕಡೆ ಕೆಕೆಆರ್‌ಟಿಸಿ ಘಟಕದಿಂದ ಬಸ್ ಬಿಡಲಾಗುತ್ತಿದೆ ಎಂಬ ಸುದ್ದಿ ತಿಳಿದ ತಕ್ಷಣ ಹೋರಾಟಗಾರರು,ಬಿಜೆಪಿ ಕಾರ್ಯಕರ್ತರು ಘಟಕದ ಮುಂಭಾಗದಲ್ಲಿ ನಿಂತು ಬಸ್ ಹೊರಗಡೆ ಬಿಡುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಬಂದ್ ಪೂರ್ಣಗೊಳ್ಳುವವರೆಗೆ ಬಸ್ ಸಂಚಾರ ಸ್ಥಗಿತಗೊಳಿಸಬೇಕು.ಒಂದು ವೇಳೆ ಬಸ್‌ಗಳನ್ನು ಹೊರಗೆ ಬಿಟ್ಟರೆ ಮುಂದಾಗುವ ಅನಾಹುತಗಳಿಗೆ ಪೊಲೀಸರು,ಕೆಕೆಆರ್‌ಟಿಸಿ ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದಾಗ ಬಸ್ ಕಾರ್ಯಾಚರಣೆಯನ್ನು ಘಟಕದ ವ್ಯವಸ್ಥಾಪಕ ಅಶೋಕಕುಮಾರ ಭೋವಿ ಕೈ ಬಿಟ್ಟರು.







