ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ ಮಾಡಿಕೊಳ್ಳಬೇಕು ಎಂದು ಕೆಬಿಜೆಎನ್ಎಲ್ ಎಎಲ್ಬಿಸಿ ಉಪವಿಭಾಗ ನಂ.2ದ ಅಧಿಕಾರಿ ನಮ್ಮ ರೈತರಿಗೆ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ ಎಂದು ನಾಲತವಾಡದ ಯುವ ರೈತ ಮುಖಂಡ ಸಂಗಮೇಶ ಮೇಟಿ ಆರೋಪಿಸಿದರು.
ತಾಲ್ಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಲ್ಯಾಟರಲ್ ನಂ.10ರ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ಹುಡ್ಕೋದಲ್ಲಿರುವ ಸಂಬAಧಿಸಿದ ಕೆಬಿಜೆಎನ್ಎಲ್ ಉಪ ವಿಭಾಗದ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಲತವಾಡ ಭಾಗದಲ್ಲಿ ಸುಮಾರು 13ವರ್ಷಗಳ ಮೊದಲೇ ರೈತರ ಜಮೀನು ವಶಪಡಿಸಿಕೊಂಡು ಚಿಮ್ಮಲಗಿ ಏತನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಸದರಿ ಕಾಲುವೆ ಈವರೆಗೂ ವೈಜ್ಞಾನಿಕವಾಗಿ ನೀರು ಹರಿಸಿಲ್ಲ.ಕಾಲುವೆಗೆ ಜಮೀನು ಕಳೆದುಕೊಂಡವರ ಜಮೀನಿಗೂ ನೀರು ಬರುತ್ತಿಲ್ಲ.ಸದ್ಯ ಕಾಲುವೆಯಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದು ವರ್ಷದ ಮಳೆ ಕೊರತೆಯಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳು ಒಣಗಿ ಹೋಗುತ್ತಿವೆ.ಸದರಿ ಕಾಲುವೆ ಇದ್ದೂ ಇಲ್ಲದಂತಾಗಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ಕೇಳಿದರೆ ನಮ್ಮಲ್ಲಿ ಉಪ ಕಾಲುವೆಗಳ ದುರಸ್ತಿಗೆ,ಮುಳ್ಳುಂಟಿಗಳ ತೆರವಿಗೆ ಹಣ ಕೊಡುವುದಿಲ್ಲ.ರೈತರೇ ಪಟ್ಟಿ ಹಾಕಿಕೊಂಡು ದುರಸ್ತಿ ಮಾಡಿಕೊಳ್ಳಿ ಎಂದು ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ.ಮೊದಲೇ ಬರಗಾಲ ಬಿದ್ದಿದ್ದು ರೈತರ ಬಳಿ ಬಿಡಿಗಾಸು ಇಲ್ಲ.ಕೂಡಲೇ ಲ್ಯಾಟರಲ್ ಕಾಲುವೆಯ ಹೂಳು,ಮುಳ್ಳು ಕಂಟಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತರಾದ ಬಸವರಾಜ ಡೇರೇದ,ಉಮೇಶ ಪಾಟೀಲ,ಜೆ.ಪಿ.ಸ್ಥಾವರಮಠ,ಈಶ್ವರಪ್ಪ ಕುಂಟೋಜಿ,ಮಲ್ಲಿಕಾರ್ಜುನ ಕುಂಟೋಜಿ,ಬಿ.ಎಸ್.ಸಜ್ಜನ,ಎಸ್.ಎಸ್.ಮಾಗಿ,ವಿ.ಎಸ್.ಗಾಡಿ,ಷಣ್ಮುಖ ಹಾವರಗಿ,ಅಮರಯ್ಯ ಸ್ಥಾವರಮಠ,ಗಂಗಪ್ಪ ನವಲಿ,ಶಾಂತಪ್ಪ ಕ್ಷತ್ರಿ,ಯಂಕಪ್ಪ ಕ್ಷತ್ರಿ,ಅಶೋಕ ಬಾದವಾಡಗಿ,ಶಿವಕುಮಾರ ಭಜಂತ್ರಿ,ರುದ್ರಸ್ವಮಿ ಕಂಠಿಮಠ,ಶಾOತಪ್ಪ ನವಲಿ ಮೊದಲಾದವರು ಇದ್ದರು.







