ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮೇಲೆ ಹಣ ದುರುಪಯೋಗದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅವರಿಗೆ ಸರ್ಕಾರ ಕೊಟ್ಟಿರುವ ಸ್ಥಾನಮಾನಗಳನ್ನು ಹಿಂಪಡೆದುಕೊoಡು ತನಿಖೆ ನಡೆಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲ್ಲೂಕು ಘಟಕದಿಂದ ರಾಜ್ಯಪಾಲರು,ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿದ ಪದಾಧಿಕಾರಿಗಳು, ಶಿರಸ್ತೇದಾರ ಎಂ.ಎ.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಕುರಿತು ಸಲ್ಲಿಸಿದ ಮನವಿಯಲ್ಲಿ, ಹಿರಿಯ ಪತ್ರಕರ್ತರು,ಸಾಹಿತಿಗಳಾಗಿದ್ದ ದಿ.ಡಿ.ವಿ.ಜಿ ಅವರು ಸಂಸ್ಥಾಪಿಸಿದoತ ಕಾರ್ಯನಿರತ ಪತ್ರಕರ್ತರ ಸಂಘದ 25 ಲಕ್ಷ ರೂಗಳನ್ನು ಅವಧಿ ಮುಗಿಯುವ ಮುನ್ನವೇ ಬಿಡುಗಡೆ ಮಾಡಿಕೊಂಡು ಸಂಘಕ್ಕೆ ವಂಚಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿಯಲ್ಲಿ ಐ.ಪಿ.ಸಿ 1860 (ಕಲಂ 420,421,403,415) ರಡಿಯಲ್ಲಿ ಪ್ರಕರಣ ದಾಖಲಾಗಿವೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ನಾಮ ನಿರ್ದೇಶನ ಸ್ಥಾನಗಳಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯತ್ವ ಸ್ಥಾನ, ಪತ್ರಕರ್ತರ ಮಾಸಾಶನ ಸಮಿತಿ ಸ್ಥಾನ ಹಾಗೂ ಇತ್ತೀಚೆಗೆ ಘೋಷಣೆಯಾಗಿರುವ 2026-2027 ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಈ ಕೂಡಲೇ ರಾಜ್ಯ ಸರ್ಕಾರ ರದ್ದುಪಡಿಸಿ ನಾಡಿನ ಪತ್ರಕರ್ತರ ಘನತೆ ಗೌರವವನ್ನು ಕಾಪಾಡಬೇಕೆಂದು ಒತ್ತಾಯಿಸಲಾಗಿದೆ.
ಮನವಿಗೆ ಕಾನಿಪ ಧ್ವನಿ ತಾಲ್ಲೂಕು ಅಧ್ಯಕ್ಷ ಶಂಕರ ಹೆಬ್ಬಾಳ, ಜಿಲ್ಲಾ ಕಾರ್ಯಕಾರಿ ಸಮೀತಿ ಸದಸ್ಯರಾದ ರವಿ ತೇಲಂಗಿ,ಉಪಾಧ್ಯಕ್ಷರಾದ ಅನೀಲ ತೇಲಂಗಿ,ಭಾರತಿ ಎಚ್.ನಲವಡೆ,ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ,ಖಜಾಂಚಿ ಹಣಮಂತ ನಲವಡೆ,ಸದಸ್ಯರಾದ ವಿನಯ ಕಡ್ಲಿಮಟ್ಟಿ,ಮುತ್ತು ಕನ್ನೂರ,ಹಣಮಂತ ಪವಾರ,ಜಿಲ್ಲಾ ಉಪಾಧ್ಯಕ್ಷ ಮಾರುತಿ ಹಿಪ್ಪರಗಿ ಸಹಿ ಮಾಡಿದ್ದಾರೆ.







