ದೊಡ್ಡಬಳ್ಳಾಪುರ: ತುರ್ತು ಕರೆಯ ಹಿನ್ನೆಲೆಯಲ್ಲಿ ರೋಗಿಯನ್ನು ರಕ್ಷಿಸಲು ಹೊರಟಿದ್ದ 108 ಅಂಬುಲೆನ್ಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ಉರುಳಿ ಬಿದ್ದಿರುವ ಘಟನೆ ಕಳೆದ ರಾತ್ರಿ ಟಿ.ಬಿ.ಸರ್ಕಲ್ ಬಳಿ ಸಂಭವಿಸಿದೆ.
ಘಟನೆಯಲ್ಲಿ ಆಂಬುಲನ್ಸ್ ಚಾಲಕ ಗಂಗಾಧರ್ ಅವರಿಗೆ ತಲೆ ಹಾಗೂ ಪಕ್ಕೆಲುಬಿಗೆ ತೀವ್ರ ಪೆಟ್ಟಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ ಎಸ್ ಘಾಟಿ ವ್ಯಾಪ್ತಿಯ ಆಂಬುಲನ್ಸ್ ಇದಾಗಿದ್ದು, ಗುರುವಾರ ರಾತ್ರಿ ದೊಡ್ಡಬೆಳವಂಗಲದಿಂದ ಬಂದ ತುರ್ತು ಕರೆಯ ಹಿನ್ನೆಲೆಯಲ್ಲಿ ರೋಗಿಯನ್ನು ಕರೆತರಲು 108 ಅಂಬುಲೆನ್ಸ್ ಹೊರಟಿತ್ತು.
ಈ ವೇಳೆ ಟಿ.ಬಿ.ವೃತ್ತದ ಬಳಿ ತಿರುವು ಪಡೆಯುವಾಗ ಬೆಂಗಳೂರು ಕಡೆಯಿಂದ ಬಂದ ಕಾರು ವೇಗವಾಗಿ ಅಂಬುಲೆನ್ಸ್‌ನ ಹಿಂದಿನ ಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದಿದೆ.
ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಕಾರಿಗೆ ಸಿಲುಕಿದ ಶವವನ್ನು 1 ಕಿ.ಮೀ ಎಳೆದೊಯ್ದ ಭೂಪ!
ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.