ಮುದ್ದೇಬಿಹಾಳ : ತಾಲ್ಲೂಕಿನ ಕೋಳೂರು ಕ್ರಾಸ್‌ನಲ್ಲಿ ಕೊಲ್ಹಾಪುರದ ಉದ್ಯಮಿಯೊಬ್ಬರ ಕಾರು ಅಡ್ಡಗಟ್ಟಿ ಹಣ,ಚಿನ್ನಾಭರಣ ದೋಚಿದ್ದ ಆರೋಪಿತರನ್ನು ಶನಿವಾರ ಇಲ್ಲಿನ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಕೊಲ್ಹಾಪುರದ ಉದ್ಯಮಿ ಅಶೋಕ ಕುಲಕರ್ಣಿ ಎಂಬುವರು ಆ.29 ರಂದು ಮುದ್ದೇಬಿಹಾಳದಿಂದ ತಂಗಡಗಿ ಕಡೆಗೆ ತೆರಳುವಾಗ ಕೋಳೂರು ಕ್ರಾಸ್‌ಬಳಿ ಅವರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕು ತೋರಿಸಿ ಕಣ್ಣಿಗೆ ಖಾರದಪುಡಿ ಎರಚಿ ಅವರ ಬಳಿ ಇದ್ದ ಚಿನ್ನದ ಉಂಗುರು, ನಗದು ಹಣ, ಕೊರಳಲ್ಲಿದ್ದ ಚಿನ್ನದ ಸರ ಸೇರಿ ಒಟ್ಟು 61 ಸಾವಿರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣವನ್ನು ಯಾರೋ ಇಬ್ಬರು ವ್ಯಕ್ತಿಗಳು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದರ ತನಿಖೆ ನಡೆಸಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಮ್ ಪಿಎಸ್‌ಐ ಆರ್.ಎಲ್.ಮನ್ನಾಭಾಯಿ ಹಾಗೂ ತಂಡದವರು, ತಾಂತ್ರಿಕ ಸಹಾಯದಿಂದ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿತರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ರಾಕೇಶ ಸಾವಂತ, ರೋಹನ ಯೇಡಕರ, ಪ್ರಥಮೇಶ ಹವಾಲ್ದಾರ ಎಂಬುವರನ್ನು ಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯದಲ್ಲಿ ಭಾಗಿಯಾಗಿದ್ದು ತಾವೆ ಎಂದು ಒಪ್ಪಿಕೊಂಡಿದ್ದು ಅವರಿಂದ ಚಿನ್ನಾಭರಣ, ನಗದು ಹಣ, ಒಂದು ಬೈಕ್, ಮೊಬೈಲ್ ಫೋನಗಳು ಸೇರಿ ಒಟ್ಟು 1.70 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Festivel: ಸೆ.1 ರಿಂದ ಕುಂಟೋಜಿ ಬಸವೇಶ್ವರ ಜಾತ್ರೋತ್ಸವ.. ಯಾತ್ರಾತ್ರಿಗಳಿಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಕೊಠಡಿಗಳ ನಿರ್ಮಾಣ
ಆರೋಪಿತರನ್ನು ಪತ್ತೆ ಹಚ್ಚಲು ಶ್ರಮಿಸಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಮ್ ಪಿಎಸ್‌ಐ ಆರ್.ಎಲ್.ಮನ್ನಾಭಾಯಿ, ಸಿಬ್ಬಂದಿ ಬಿ.ಕೆ.ಗುಡಿಮನಿ, ಆರ್.ಎಸ್.ಪಾಟೀಲ್, ವಿ.ಎನ್.ಹಾಲಗಂಗಾಧರಮಠ, ಸಿ.ಎಸ್.ಬಿರಾದಾರ, ಆರ್.ಎಸ್.ಮಾದರ, ಎಸ್.ಎಲ್.ಹತ್ತರಕಿಹಾಳ ಅವರ ತಂಡಕ್ಕೆ ಎಸ್ಪಿ ಋಷಿಕೇಶ ಸೋನಾವಣೆ ಬಹುಮಾನ, ಪ್ರಶಂಸನಾ ಪತ್ರ ಘೋಷಣೆ ಮಾಡಿದ್ದಾರೆ.