ಮುದ್ದೇಬಿಹಾಳ : ‘ಸೈಟ್ ಅಕ್ರಮ ಖರೀದಿಯ ಬಗ್ಗೆ ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ವಿರುದ್ಧ ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಮಾಡಿರುವ ಆರೋಪದ ಬಗ್ಗೆ ಶಾಸಕ ನಾಡಗೌಡರೇ ಉತ್ತರ ಕೊಡಬೇಕೆ ಹೊರತು ಅವರ ಬಾಲಂಗೋಚಿಗಳಲ್ಲ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹಾಗೂ ಬಿಜೆಪಿ ಮುಖಂಡ ಹರೀಶ ನಾಟೀಕಾರ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಾಲಿ ಶಾಸಕರು ತಂದಿರುವ ಅನುದಾನ ಎಷ್ಟು ಎಂಬುದನ್ನು ಆಧಾರ ಸಮೇತ ಕಾಂಗ್ರೆಸ್ಸಿಗರು ಮಾಧ್ಯಮವರಿಗೆ ವಿವರಿಸಬೇಕು. ಅದು ಬಿಟ್ಟು ಕೂಗಾಡುವುದು ಸುದ್ದಿಗೋಷ್ಠಿಯಲ್ಲ. ಅಷ್ಟಕ್ಕೂ ಆರೋಪ ಮಾಡಿದವರಿಗೆ ಆರೋಪ ಯಾರು ಹೊತ್ತಿದ್ದಾರೆಯೋ ಅವರು ಉತ್ತರ ಕೊಡಬೇಕಿತ್ತು. ಆದರೆ ಇಲ್ಲಿ ಕಾಂಗ್ರೆಸ್ ಮುಖಂಡರು, ದಾಖಲೆಗಳಿಲ್ಲದೇ ವಿನಾಕಾರಣ ಶಾಸಕರನ್ನು ಸಮರ್ಥನೆ ಮಾಡಿಕೊಳ್ಳಬೇಕು ಎಂಬ ಉದ್ದೇಶವೊಂದೇ ಇದೆ ಎಂದರು.
ಜನಪ್ರತಿನಿಧಿಯಾದವರಿಗೆ ಒಳ್ಳೆಯತನದ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಚಿಂತನೆಯೂ ಬೇಕು. ಇಪ್ಪತೈದು ವರ್ಷಗಳಿಂದ ಆಗಿರುವ ಅಭಿವೃದ್ಧಿಯನ್ನು ಕ್ಷೇತ್ರದ ಜನತೆ ಗಮನಿಸಿದ್ದಾರೆ, ನಡಹಳ್ಳಿಯವರ ಅವಧಿಯಲ್ಲಾದ ಅಭಿವೃದ್ಧಿಯನ್ನೂ ನೋಡಿದ್ದಾರೆ. ಎಲ್ಲೊ ಒಂದು ಕಡೆ ಸಿಸಿ ರಸ್ತೆ ಬಿರುಕು ಬಿಟ್ಟಿದ್ದನ್ನೇ ಎತ್ತಿ ತೋರಿಸುವ ಕಾಂಗ್ರೆಸ್ ಮುಖಂಡರಿಗೆ ಹಳೇ ಸರಕಾರಿ ರಸ್ತೆಯಲ್ಲಿರುವ ಶೃಂಗಾರಗೌಡ ಪಾಟೀಲರ ಮನೆ ಮುಂದೆ ರಸ್ತೆ ಕಳಪೆಮಟ್ಟದ್ದಾಗಿದ್ದು ಕಂಡಿಲ್ಲವೇ ? ಏಪಿಎಂಸಿಯಲ್ಲಿ ಯಾವ ರೀತಿ ಕೆಲಸ ಮಾಡಲಾಗುತ್ತಿದೆ. ಯಾರು ಗುತ್ತಿಗೆದಾರರು ಇದ್ದಾರೆ ಎಂಬುದನ್ನು ಸ್ವಲ್ಪ ಬಿಡಿಸಿ ಹೇಳಬೇಕಿತ್ತು ಎಂದು ತಿಳಿಸಿದರು.
ಕವಡಿಮಟ್ಟಿ ಗ್ರಾಮಕ್ಕೆ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆಗೆ ಸಿಎಂ ಬಂದಾಗ ಸೌಜನ್ಯಕ್ಕೂ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿಸಲಿಲ್ಲ. ನಾಲತವಾಡ, ಮುದ್ದೇಬಿಹಾಳದಲ್ಲಿ ನಿರ್ಮಿಸಿರುವ ವೃತ್ತದಲ್ಲಿರುವ ಪುತ್ಥಳಿಗಳ ನಿರ್ಮಾಣದ ಕಾಮಗಾರಿಗೆ ಬಿಲ್ ಕೊಡದೇ ವಿಳಂಬ ಮಾಡಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದೀರಿ ಎಂದು ದೂರಿದರು.
ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ ಮಾತನಾಡಿ, ಮಾಜಿ ಶಾಸಕ ನಡಹಳ್ಳಿಯವರು ಕೈಗೊಂಡಿರುವ ಅಭಿವೃದ್ಧಿ ಬಗ್ಗೆ ನಾವು ಹೇಳುವುದಕ್ಕೆ ಇಲ್ಲಿ ಕೂತಿಲ್ಲ.ಹಾಲಿ ಶಾಸಕರು ಎಷ್ಟು ಅನುದಾನ ಕ್ಷೇತ್ರಕ್ಕೆ ತಂದಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕು ಎಂದರು.
ಸೈಟ್ ಬಗ್ಗೆ ಬಂದಿರುವ ಆರೋಪದ ಬಗ್ಗೆ ಜನತೆಗೆ ಉತ್ತರ ನೀಡಬೇಕು. ಅದು ಬಿಟ್ಟು ಅವರ ಹಿಂಬಾಲಕರನ್ನು ಮುಂದೆ ಮಾಡಿರುವುದು ಸೋಜಿಗದ ಸಂಗತಿ.ಅವರ ನಾಯಕರ ಪರ ಆ ಪಕ್ಷದ ಮುಖಂಡರು ಮಾತನಾಡಿದರೆ ನಮ್ಮ ಪಕ್ಷದ ನಾಯಕರ ಪರವಾಗಿ ನಾವು ಮಾತನಾಡಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲಕ್ಷ್ಮಣ ಬಿಜ್ಜೂರ, ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ ಮಾತನಾಡಿದರು.
ಇದನ್ನೂ ಓದಿ: Protest: ಯಡಹಳ್ಳಿ ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ
ಮುಖಂಡರಾದ ಸೋಮನಗೌಡ ಬಿರಾದಾರ, ಸಂಜು ಬಾಗೇವಾಡಿ, ಶಂಕರಗೌಡ ಶಿವಣಗಿ, ಸುಭಾಷ್ ಕಟ್ಟಿಮನಿ, ನಾಗೇಶ ಕವಡಿಮಟ್ಟಿ, ಶೇಖರ ಢವಳಗಿ, ರೇವಣೆಪ್ಪ ಅಜಮನಿ, ಆನಂದ ಚವ್ಹಾಣ, ಶಿವಾನಂದ ಮಂಕಣಿ, ರವೀಂದ್ರ ಬಿರಾದಾರ ಇದ್ದರು.
ಬಿಜೆಪಿ ಮುಖಂಡರ ಸುದ್ದಿಗೋಷ್ಠಿ:
— dcgkannada (@dcgkannada) September 10, 2024
‘ಶಾಸಕರೇ ಉತ್ತರ ಕೊಡಲಿ, ಅವರ ಬಾಲಂಗೋಚಿಗಳಲ್ಲ’ pic.twitter.com/hGXbz6yTvD