ಮುದ್ದೇಬಿಹಾಳ : ಪಟ್ಟಣಕ್ಕೆ ಸದ್ಯಕ್ಕೆ ಐದಾರು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದ್ದು, ಆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ ಜನತೆಗೆ ಮೂರು ದಿನಕ್ಕೊಮ್ಮೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು (Muddebihal news) ಪುರಸಭೆ ನೂತನ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಅಧ್ಯಕ್ಷ,ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶುಕ್ರವಾರ ಹಮ್ಮಿಕೊಂಡಿದ್ದ ಅಧಿಕಾರ ಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚರಂಡಿ ವ್ಯವಸ್ಥೆ, ಬೀದಿ ದೀಪಗಳು, ನಗರದ ಸ್ವಚ್ಛತೆ ಹಾಗೂ ಯುಜಿಡಿ ಯೋಜನೆಯನ್ನು ಆದಷ್ಟು ತ್ವರಿತವಾಗಿ ಪುರಸಭೆಗೆ ಹಸ್ತಾಂತರ ಮಾಡಿಕೊಂಡು ಜನತೆಗೆ ಅನುಕೂಲ ಒದಗಿಸಿಕೊಡುವ ಕಾರ್ಯ ಮಾಡುತ್ತೇವೆ.ಇಲ್ಲಿ ಚುನಾವಣೆ ಬಂದಾಗಲಷ್ಟೇ ಪಕ್ಷ ಎಂದು ಭಾವಿಸುತ್ತೇನೆ. ಉಳಿದ ಎಲ್ಲ ಸದಸ್ಯರ ಸಹಕಾರದೊಂದಿಗೆ ಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತೇವೆ ಎಂದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಮಾತನಾಡಿ, ಹೋರಾಟದಿಂದಲೇ ಅಧ್ಯಕ್ಷ ಸ್ಥಾನದವರೆಗೆ ಬೆಳೆದಿರುವ ಮಹೆಬೂಬ ಗೊಳಸಂಗಿ ಅವರು ಒಳ್ಳೆಯ ಆಡಳಿತ ನೀಡಲಿ.ಪಂಚಮಸಾಲಿ ಸಮಾಜದ ಪ್ರೀತಿ ದೇಗಿನಾಳ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಪಂಚಮಸಾಲಿ ಸಮಾಜದವರಿಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿಯವರು ಆದ್ಯತೆ ಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಜನರ ಸಮಸ್ಯೆಗಳನ್ನು ಮೊದಲ ಆದ್ಯತೆ ಮೇರೆಗೆ ಪರಿಹರಿಸಲು ನೂತನ ಅಧ್ಯಕ್ಷರು ಶ್ರಮಿಸಬೇಕು. ದಿ.ಅಲ್ಲಾಭಕ್ಷ್ಯ ಢವಳಗಿ ನಂತರದಲ್ಲಿ ಗೊಳಸಂಗಿಯವರು ಅಲ್ಪಸಂಖ್ಯಾತರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಪುರಸಭೆ ನೂತನ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮುಖಂಡ ವಾಯ್.ಎಚ್.ವಿಜಯಕರ್, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿದರು.
ಇದಕ್ಕೂ ಮುನ್ನ ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರ ಕೊಠಡಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ಬಳಿಕ ಅಧ್ಯಕ್ಷ ಮಹೆಬೂಬ ಗೊಳಸಂಗಿ ಅವರು ಅಧಿಕಾರ ವಹಿಸಿಕೊಂಡರು. ವಿವಿಧ ಮಸೀದಿಯ ಮೌಲಾನಾಗಳು ಗೊಳಸಂಗಿ ಅವರನ್ನು ಅಭಿನಂದಿಸಿದರು. ವಿವಿಧ ಸಂಘ ಸಂಸ್ಥೆಯ ಪ್ರಮುಖರು ನೂತನ ಪುರಸಭೆ ಅಧ್ಯಕ್ಷ ಗೊಳಸಂಗಿ, ಉಪಾಧ್ಯಕ್ಷೆ ದೇಗಿನಾಳ ಅವರನ್ನು ಸನ್ಮಾನಿಸಿದರು.
ಕಣ್ಣೀರಾಕಿದ ಕಾಂಗ್ರೆಸ್ ಮುಖಂಡನ ಪುತ್ರ
ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅಧ್ಯಕ್ಷರ ಹೆಸರು ಉಚ್ಛರಿಸುವಾಗ ಈಚೇಗೆ ನಿಧನರಾದ ಸದಸ್ಯ ಅಲ್ಲಾಭಕ್ಷ ಅವರ ಹೆಸರು ಹೇಳಿದ ಪ್ರಸಂಗ ನಡೆಯಿತು. ಒಂದು ವೇಳೆ ಅಲ್ಲಾಭಕ್ಷ ಅವರು ಜೀವಂತವಾಗಿದ್ದರೆ ಅವರೇ ಅಧ್ಯಕ್ಷರಾಗಿರುತ್ತಿದ್ದರು ಎಂಬ ಮಾತುಗಳು ಕೇಳಿ ಬಂದವು.
ಇದನ್ನೂ ಓದಿ: Gold Price Today : ಚಿನ್ನ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್!
ಬಳಿಕ ಅದನ್ನು ಪುನರುಚ್ಛರಿಸಿದ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಅವರು, ಪುರಸಭೆ ಹಿರಿಯ ಸದಸ್ಯರಾಗಿದ್ದ ದಿ.ಅಲ್ಲಾಭಕ್ಷ ಅವರ ಹೆಸರು ಇಲ್ಲಿ ಬಂದಿದೆ ಎಂದರೆ ಅವರು ಜೀವಂತ ಇದ್ದಾಗ ತೋರಿದ ಘನತೆಯ ಆಡಳಿತವನ್ನು ಗೊಳಸಂಗಿ ಅವರು ನೀಡಿ ಎಂದು ನೆನಪಿಸಿದರು. ಈ ವೇಳೆ ಅಲ್ಲಾಭಕ್ಷ ಢವಳಗಿ ಅವರ ಪುತ್ರ ಬಾಪ್ ಢವಳಗಿ ತಂದೆಯ ಹೆಸರು ಪ್ರಸ್ತಾಪವಾಗಿದ್ದಕ್ಕೆ ಕಣ್ಣೀರಾದರು.