
ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ವೆಬ್‌ಕಾಸ್ಟಿಂಗ್ ನಿಗಾ ವಹಿಸಿದ ಹಿನ್ನೆಲೆಯಲ್ಲಿ ಈ ಸಲದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಬಿಗಿ ಬಂದೋಬಸ್ತ್ ನಲ್ಲಿ ಆರಂಭಗೊಂಡಿವೆ. ತಾಲ್ಲೂಕಿನ 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಆರಂಭಗೊಂಡಿದೆ.

ತಾಳಿಕೋಟಿಯ ಎಸ್.ಕೆ. ಪಿಯು ಕಾಲೇಜಿನಲ್ಲಿ 5, ಮಿಣಜಗಿ ಕ್ರಾಸ್‌ನ ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 17, ಸಂಗಮೇಶ್ವರ ಪ್ರೌಢಶಾಲೆಯಲ್ಲಿ 6, ಸರ್ವಜ್ಞ ವಿದ್ಯಾಪೀಠದಲ್ಲಿ 12, ಮುದ್ದೇಬಿಹಾಳದ ವಿಬಿಸಿಯಲ್ಲಿ 20, ಅಭ್ಯುದಯ ಇಂಟರ್‌ನ್ಯಾಶನಲ್ ಶಾಲೆಯಲ್ಲಿ 39, ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ 14, ಬಸರಕೋಡದ ಪವಾಡ ಬಸವೇಶ್ವರ ಪ್ರೌಢಶಾಲೆಯಲ್ಲಿ 12, ಮುದ್ದೇಬಿಹಾಳದ ಚಿನ್ಮಯ ಜೆಸಿ ಶಾಲೆಯಲ್ಲಿ 15, ಇಂಗಳಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 9, ನಾಲತವಾಡದ ವೀರೇಶ್ವರ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 11, ಮೈಲೇಶ್ವರದ ಬ್ರಿಲಿಯಂಟ್ ಶಾಲೆಯಲ್ಲಿ 1, ನಾಗರಬೆಟ್ಟದ ಎಸ್.ಡಿ.ಕೆ ಪ್ರೌಢಶಾಲೆಯಲ್ಲಿ 4, ಕೊಡಗಾನೂರದ ಬ್ಯಾಲ್ಯಾಳ ಕ್ರಾಸ್‌ನ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ 15, ರಕ್ಕಸಗಿ ಕೆಪಿಎಸ್ ಶಾಲೆಯಲ್ಲಿ 17, ಬಳಬಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 3, ಹಿರೂರ ಭೋಗೇಶ್ವರ ಪ್ರೌಢಶಾಲೆಯಲ್ಲಿ 8, ನಾಗರಬೆಟ್ಟದ ಆಕ್ಸಫರ್ಡ್ ಪ್ರೌಢಶಾಲೆಯಲ್ಲಿ 1 ವಿದ್ಯಾರ್ಥಿಗಳು ಗೈರು ಉಳಿದಿದ್ದು ಒಟ್ಟು 6531 ವಿದ್ಯಾರ್ಥಿಗಳ ಪೈಕಿ 6302 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಶುಕ್ರವಾರ ಪ್ರಥಮ ಭಾಷೆಯ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಗುಂಪು ಗುಂಪಾಗಿ ನಿಂತು ಪರೀಕ್ಷೆ ವ್ಯವಸ್ಥೆಯ ಕುರಿತು ಚರ್ಚೆ ಮಾಡಿದರು. ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳು ಪರೀಕ್ಷೆ ಒಳ್ಳೆಯ ರೀತಿಯಲ್ಲಿ ನಡೆದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ನಕಲನ್ನು ನಂಬಿದ್ದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಿರಾಸೆಯನ್ನುಂಟು ಮಾಡಿತು ಎಂದು ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ತಿಳಿಸಿದರು.