ಮುದ್ದೇಬಿಹಾಳ : ತಾಲೂಕಿನಾದ್ಯಂತ ಪಿಯುಸಿ ಮತ್ತು ಪದವಿ ಕಾಲೇಜುಗಳ ಸಂಖ್ಯೆ ಸಾಕಷ್ಟು ಇದ್ದು ತಾಲ್ಲೂಕಿನಲ್ಲಿ ಸರ್ಕಾರಿ ಬಿಎಡ್ ಕಾಲೇಜು ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಮುತ್ತು ಚಲವಾದಿ ಮಾತನಾಡಿ, ಪ್ರತಿ ವರ್ಷ ಇಲ್ಲಿಂದ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪದವೀಧರರಾಗಿ ಹೊರಗೆ ಬರುತ್ತಿದ್ದಾರೆ. ವಿವಿಧ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಶಿಕ್ಷಕರಾಗಲು ಬಯಸಿದರೆ ಅವರಿಗೆ ತಮ್ಮ ಪದವಿಯ ನಂತರದಲ್ಲಿ ಬಿ.ಎಡ್ ಶಿಕ್ಷಣವನ್ನು ಪಡೆಯಲೇಬೇಕು. ಖಾಸಗಿ ಶಿಕ್ಷಣ ಸಂಸ್ಥೆಯೊAದರ ಅಡಿಯಲ್ಲಿ ಬಿ.ಎಡ್ ಕಾಲೇಜು ಇದ್ದರೂ ಅಲ್ಲಿ ವಿಪರೀತ ಶುಲ್ಕವನ್ನು ಕಟ್ಟಿ ಪ್ರವೇಶ ಪಡೆಯಲು ಬಡ ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿದೆ ಎಂದು ಹೇಳಿದರು.
ಇಷ್ಟೊಂದು ಪ್ರಮಾಣದಲ್ಲಿ ಪದವಿ ಕಾಲೇಜುಗಳಿದ್ದರೂ ಪದವಿ ನಂತರದ ಶಿಕ್ಷಣ ಸೌಲಭ್ಯ ಇಲ್ಲದ್ದರಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಅರ್ಧಕ್ಕೆ ತಮ್ಮ ಶಿಕ್ಷಣವನ್ನು ನಿಲ್ಲಿಸುತ್ತಿದ್ದಾರೆ.ಶಿಕ್ಷಕರಾಗುವ ಕನಸಿಗೆ ಇದು ಅಡ್ಡಿಯುಂಟಾಗಿದ್ದು ಚಳಿಗಾಲದ ಅಧಿವೇಶನದಲ್ಲಿ ಮುದ್ದೇಬಿಹಾಳಕ್ಕೆ ಸರಕಾರಿ ಬಿ.ಎಡ್ ಕಾಲೇಜು ಮಂಜೂರು ಮಾಡಿಸಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ವಿದ್ಯಾರ್ಥಿಗಳಾದ ಬಸವರಾಜ ಮಹಾಲಿಂಗಪೂರ, ಅನಿಲ ರಾಠೋಡ, ಬಸಮ್ಮ ಬಿರಾದಾರ, ಸಂಗಮ್ಮ ನಾಟೀಕಾರ, ಸಹನಾ ಕಲಾಲ, ಅನಿಸ ಮೋಮಿನ, ದ್ಯಾಮಕ್ಕ ವಾಲೀಕಾರ, ಭಾಗ್ಯಶ್ರೀ ಬಿರಾದಾರ, ರಾಧಿಕಾ ಮಾಡಗಿ, ಪ್ರಜ್ವಲ ಪಾಟೀಲ್ , ಶ್ರಾವಣಿ ಬಡಿಗೇರ, ಅರ್ಪಿತಾ ಮುಚಖಂಡಿ ಸೇರಿದಂತೆ ಇನ್ನಿತರ ಸಮುದಾಯಗಳ ವಿದ್ಯಾರ್ಥಿಗಳು ಇದ್ದರು.