
ಮುದ್ದೇಬಿಹಾಳ : ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ರಂಭಾಪುರಿ ಸ್ವಾಮೀಜಿಯವರು ಸೇರಿದಂತೆ ಹಲವು ಮಠಾಧೀಶರು ವೀರಶೈವ ಹಾಗೂ ಲಿಂಗಾಯತ ಸಮಾಜಗಳು ಬೇರೆಯಲ್ಲ, ಎರಡೂ ಒಂದೇ ಎಂದು ಪ್ರತಿಪಾದಿಸಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.

ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಶಿಖ್ ಜನಾಂಗಕ್ಕಿಂತ ಎರಡುವರೆ ಪಟ್ಟು ವೀರಶೈವ ಲಿಂಗಾಯತ ಸಮಾಜದ ಜನಸಂಖ್ಯೆ ಇದೆ. ಶತ ಶತಮಾನದಿಂದ ಪರಿಶ್ರಮದಿಂದ ನಡೆದುಕೊಳ್ಳುವ ನ್ಯಾಯ ನಿಷ್ಠುರ ಜನಾಂಗ ವೀರಶೈವ, ಲಿಂಗಾಯತ ಸಮುದಾಯವಾಗಿದೆ. ಆದರೆ ರಾಜಕೀಯವಾಗಿ ಕಳೆದ 27 ವರ್ಷಗಳಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತ ಬರುತ್ತಿದ್ದೇವೆಯೋ ಕೇಂದ್ರದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ನಮ್ಮ ಸಮುದಾಯದಿಂದ ಶೇ.90 ರಷ್ಟು ಬೆಂಬಲ ಕೊಟ್ಟಿದ್ದರೂ ಸಮಾಜದ ಒಬ್ಬರೂ ಗವರ್ನರ್ ಆಗಿಲ್ಲ.ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ನಾಮನಿರ್ದೇಶನ ಮಾಡಿಲ್ಲ. ಸಮುದಾಯದಿಂದ ಆಯ್ಕೆಯಾಗಿರುವ ಸಂಸದರು ಸಮಾಜದ ಬಗ್ಗೆ ಮಾತನಾಡುತ್ತಿಲ್ಲ. ಸಮಾಜವನ್ನು ನಮ್ಮಲ್ಲಿ ನಾವು ವಿಘಟನೆ ಮಾಡಿಕೊಂಡಿದ್ದೇವೆ. ಸಂಕುಚಿತ ಮನೋಭಾವನೆಯ ತಡೆಗೋಡೆಗಳನ್ನು ತೆರವುಗೊಳಿಸುವರೆಗೂ ನಾವು ಉದ್ಧಾರವಾಗುವುದಿಲ್ಲ. ಜಾತಿ ಸೂಚಕವನ್ನು ಬಿಟ್ಟು ನಾವೆಲ್ಲ ಲಿಂಗಾಯತರು, ವೀರಶೈವರು ಎಂದು ಒಂದೇ ವೇದಿಕೆಯಲ್ಲಿ ಹೇಳಬೇಕು ಎಂದರು. ಮನೆಯಲ್ಲಿ ಮಕ್ಕಳಿಗೆ ನಿತ್ಯವೂ ಒಂದೆರಡು ವಚನಗಳನ್ನು ಹೇಳಿಕೊಡಿ. ತಾಯಂದಿರು, ಪಾಲಕರು ಮಕ್ಕಳಿಗೆ ಒಂದು ವಚನ ಹೇಳಿಕೊಟ್ಟರೆ ಸಂಸ್ಕಾರ, ಸಂಸ್ಕೃತಿ ಉಳಿಯುತ್ತದೆ ಎಂದರು.
ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಜಿಲ್ಲಾ ಘಟಕದ ಅಧ್ಯಕ್ಷ ವ್ಹಿ.ಸಿ.ನಾಗಠಾಣ, ಸಿದ್ಧರಾಜ ಹೊಳಿ ಮಾತನಾಡಿದರು. ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬಾ, ಗಣ್ಯರಾದ ಉಮಾದೇವಿ ಬಿದರಿ, ಮಹಾಸಭಾ ತಾಲ್ಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ್, ನಿಕಟಪೂರ್ವ ಅಧ್ಯಕ್ಷ ಬಾಪುಗೌಡ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ತಡಸದ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಪ್ರಮುಖರಾದ ಬಸವಂತ್ರಾಯ ಗೂಳಿ, ಶರಣಪ್ಪ ಬಸರಕೋಡ, ಬಸವರಾಜ ಲಮಾಣಿ, ಬಸವರಾಜ ಹಡಪದ, ಶರಣಪ್ಪ ಚಲವಾದಿ, ಮಹೆಬೂಬ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ನಾಗರಾಳ ಹಾಗೂ ಹೇಮಾ ಬಿರಾದಾರ ನಿರೂಪಿಸಿದರು. ರವೀಂದ್ರ ನಂದೆಪ್ಪನವರ ವಂದಿಸಿದರು. ಯುವ ಘಟಕ, ಮಹಿಳಾ ಘಟಕ ಹಾಗೂ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಸಲಾಯಿತು.