ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಲಿ ಎಂಬ ಸದುದ್ಧೇಶದಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಜ್ಯಾದ್ಯಾಂತ ಜೂ.1 ರಿಂದ ಸರ್ಕಾರಿ ಶಾಲೆಗಳ ಆರಂಭೋತ್ಸವಕ್ಕೆ ಸೂಚನೆ ನೀಡಿದಂತೆ ತಾಲ್ಲೂಕಿನೆಲ್ಲೆಡೆ ವೈಭವದಿಂದ ಶಾಲೆಗಳನ್ನು ಶಿಕ್ಷಕರು ಆರಂಭಿಸಿದ್ದಾರೆ.
ಕೆಲವಡೆ ಮಕ್ಕಳಿಗೆ ಸರ್ಕಾರದಿಂದ ಪೂರೈಕೆಯಾಗಿರುವ ಪಠ್ಯಪುಸ್ತಕಗಳು,ಬಟ್ಟೆ ಕೊಟ್ಟು ಸ್ವಾಗತಿಸಿಕೊಂಡರೆ ಇನ್ನು ಕೆಲವೆಡೆ ಶಾಲಾ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ಊರಿನ ತುಂಬೆಲ್ಲ ಮೆರವಣಿಗೆ ನಡೆಸಿ ಶಾಲೆಗೆ ಸ್ವಾಗತಿಸಿಕೊಂಡರು.
ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾ(ವೆAಕಟೇಶ ನಗರ)ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ನೂತನ ಎಲ್ಕೆಜಿ ಮತ್ತು ಯುಕೆಜಿ ತರಗತಿ ಕೊಠಡಿ ಉದ್ಘಾಟನೆಯನ್ನು ಮುದ್ದೇಬಿಹಾಳ ತಹಶೀಲ್ದಾರ್ ಕೀರ್ತಿ ಚಾಲಕ್ ,ಬಿಇಒ ಬಿ.ಎಸ್.ಸಾವಳಗಿ ಜಂಟಿಯಾಗಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ ಚಾಲಕ್ ಅವರು, ಸರ್ಕಾರ ಈ ವರ್ಷದಿಂದ ಪ್ರಾಥಮಿಕ ಶಾಲೆಗಳಲ್ಲೇ ಎಲ್.ಕೆ.ಜಿ.,ಯುಕೆಜಿ ತರಗತಿಗಳನ್ನು ಆರಂಭಿಸಿದ್ದು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿ, ಮುದ್ದೇಬಿಹಾಳ ಶೈಕ್ಷಣಿಕ ತಾಲ್ಲೂಕು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸದಾ ಮುಂದೆ ಇದೆ.ಪ್ರಾಥಮಿಕ ವಿಭಾಗದಲ್ಲಾಗಲೀ,ಪ್ರೌಢ ವಿಭಾಗದಲ್ಲಾಗಲೀ ಶಿಕ್ಷಕರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬರುತ್ತಿದೆ.ಪ್ರಾಥಮಿಕ ಹಂತದಲ್ಲಿ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಕಳೆದ ವರ್ಷ ಆಯ್ಕೆಯಾಗಿದ್ದರೆ ಈ ವರ್ಷದಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.ಶಾಲೆಯ ಆರಂಭದ ದಿನದಿಂದಲೇ ಮಕ್ಕಳಿಗೆ ಮೊಟ್ಟೆ, ಹಾಲು, ಬಾಳೆಹಣ್ಣು, ಬಿಸಿಯೂಟ ಕೊಡುವ ವ್ಯವಸ್ಥೆ ಕೈಗೊಂಡಿದ್ದೇವೆ ಎಂದು ಹೇಳಿದರು.
ಬಿ.ಆರ್.ಸಿ ಆರ್.ಬಿ.ಧಮ್ಮೂರಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎo.ಬೆಳಗಲ್ಲ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ, ಪಿಡಿಒ ಅರವಿಂದ ಲೋನಾರಮಠ,ಗ್ರಾಪಂ ಮಾಜಿ ಸದಸ್ಯ ಶಿವಾನಂದ ಲಮಾಣಿ, ನಿವೃತ್ತ ಮುಖ್ಯಗುರು ಲಿಂಬಾಜಿ ನಾಯಕ, ಮಾಜಿ ಸದಸ್ಯ ಥಾವರಪ್ಪ ಜಾಧವ, ಶಾಲೆಯ ಮುಖ್ಯಗುರು ಮಾನಸಿಂಗ ಎನ್ ಚವ್ಹಾಣ,ಶಾಲೆಯ ಶಿಕ್ಷಕರು,ಊರಿನ ಗಣ್ಯರು ಇದ್ದರು.ಗ್ರಾಮ ಆಡಳಿತಾಧಿಕಾರಿ ಮನೋಜ ರಾಠೋಡ, ಗುಂಡು ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮಕ್ಕಳ ಮೇಲೆ ಅಧಿಕಾರಿಗಳು ಪುಷ್ಪವೃಷ್ಟಿಗೈದು ಸ್ವಾಗತಿಸಿಕೊಂಡರು.ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಯಿತು.







