ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ ಟನ್ ಕಬ್ಬಿಗೆ 5500 ರೂ. ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆ.29 ರಂದು ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ತಮ್ಮ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.2019ರಲ್ಲಿ ಸಕ್ಕರೆಯ ಎಂ.ಎಸ್.ಪಿ ದರ 31 ರೂ.ಗೆ ಹೆಚ್ಚಿಸಲಾಗಿತ್ತು.ಈಗ ಅದಾಗಿ ಏಳು ವರ್ಷಗಳಾಗಿದ್ದು ಅದನ್ನು 60 ರೂ.ಗಳಿಗೆ ಹೆಚ್ಚಿಸಬೇಕು ಎಂದು ಸಂಘದಿoದ ಬೇಡಿಕೆ ಇರಿಸಲಾಗಿದೆ ಎಂದು ತಿಳಿಸಿದರು.ಎಫ್.ಆರ್.ಪಿ ದರದಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ.ರೈತರಿಗೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿವೆ.ಸಕ್ಕರೆ ಕಾರ್ಖಾನೆಗಳು ಬಹುತೇಕ ಶೇ.98ರಷ್ಟು ರಾಜಕಾರಣಿಗಳ ಮಾಲೀಕತ್ವದಲ್ಲಿವೆ.ಮತ್ತೆ ರಾಜ್ಯದಲ್ಲಿ 40 ಕಾರ್ಖಾನೆಗಳನ್ನು ಆರಂಭಿಸಲು ಅರ್ಜಿ ಹಾಕಿದ್ದಾರೆ.ಬಾಲಾಜಿ ಸಕ್ಕರೆ ಕಾರ್ಖಾನೆಯವರು ಹಗರಗುಂಡದಲ್ಲಿ ಕಾರ್ಖಾನೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ರೈತರ ಕಬ್ಬಿನ ಹಣವನ್ನು ಸಕ್ಕರೆ ಕಾರ್ಖಾನೆಯಿಂದ ನೇರವಾಗಿ ರೈತರ ಖಾತೆಗಳಿಗೆ ಹಾಕುವ ಕಾರ್ಯ ಆಗಬೇಕು.ಮಧ್ಯವರ್ತಿ ಕೋ ಆಪರೇಟಿವ್ ಸೊಸೈಟಿಯಿಂದ ಅಥವಾ ಇತರೆ ಅಕೌಂಟಗಳ ಮೂಲಕ ಮಾಡುವುದನ್ನು ತಪ್ಪಿಸಬೇಕು.ಬಾಲಾಜಿ ಸಕ್ಕರೆ ಕಾರ್ಖಾನೆಯಿಂದ ಸುಂದರಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ರೈತರಿಗೆ ಹಣ ಹಾಕುವ ಕೆಲಸ ಮಾಡಲಾಗುತ್ತಿದ್ದು ಇದು ಕರ್ನಾಟಕ ಬ್ಯಾಂಕಿoಗ್ ಕಾಯ್ದೆ 9(1ಬಿ) ವಿರುದ್ದವಾಗಿದೆ.ನೇರವಾಗಿಯೇ ಬ್ಯಾಂಕ್‌ನ ಅಕೌಂಟಗೆ ಹಣ ಹಾಕಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ದೇವರಾಜ ಗುಂಡಕನಾಳ ಇದ್ದರು.
25 ಲಕ್ಷ ರೂ.ವೆಚ್ಚದಲ್ಲಿ ವ್ಹೇ ಬ್ರಿಜ್: ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ ಬಳಿ ಬೈಲಕೂರ ಗ್ರಾಮದ ಮುಖಂಡ ಜಗದೀಶ ಪಂಪಣ್ಣವರ ಅವರು ತಮ್ಮ ಜಮೀನಿನಲ್ಲಿ ವ್ಹೇ ಬ್ರಿಜ್ ಹಾಕಲು ಜಾಗೆ ನೀಡಿದ್ದು 25 ಲಕ್ಷ ರೂ.ಸ್ವಂತ ಹಣ ಖರ್ಚು ಮಾಡಿ ಕಬ್ಬಿನ ಗಾಡಿಗಳನ್ನು ತೂಕ ಮಾಡಿಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.ನಾಯನೇಗಲಿ ಶುಗರ‍್ಸ್ ಬಳಿಯೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದಲೇ ತೂಕದ ಯಂತ್ರ ಸ್ಥಾಪಿಸಲಾಗುವುದು ಎಂದು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದರು.ತೂಕ ಮಾಡಿಕೊಳ್ಳುವ ಟ್ರಾಕ್ಟರ್‌ಗಳಿಗೆ ಕನಿಷ್ಠ ದರ ನಿಗದಿ ಮಾಡುತ್ತಿದ್ದು ಅಲ್ಲಿಂದ ಬಂದ ಆದಾಯವನ್ನು ವ್ಹೇ ಬ್ರಿಜ್‌ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.







