ಮುದ್ದೇಬಿಹಾಳ : 15ನೇ ಶತಮಾನದಲ್ಲಿಯೇ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಸಂತ ಕನಕದಾಸರು.ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ಮೇಲು-ಕೀಳು ಎಂಬ ಭಾವನೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಭಕ್ತಿಮಾರ್ಗವನ್ನು ಅನುಸರಿಸುವ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಅವರ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಬಿಇಒ ಎಂ.ಎಸ್. ಬಡದಾನಿ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಸಂತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರ ಕೀರ್ತನೆಗಳು ಕೇವಲ ಭಕ್ತಿಯ ಅಭಿವ್ಯಕ್ತಿಯಾಗಿರದೆ, ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ. ಜಾತಿ-ಧರ್ಮದ ಭೇದಭಾವವಿಲ್ಲದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ ಎಂದರು.
ಎಂಜಿವಿಸಿ ಕಾಲೇಜಿನ ಉಪನ್ಯಾಸಕ ವಿ.ಎಸ್.ಲಮಾಣಿ ಮಾತನಾಡಿ, ಕನಕದಾಸರ ಜೀವನ, ಸಾಹಿತ್ಯ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಂತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು.
ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ಮದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ,ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಕಾಂಗ್ರೆಸ್ ಮುಖಂಡ ವೈ.ಎಚ್. ವಿಜಯಕರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.. ಬೆಳಗಲ್, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ಉಪನ್ಯಾಸಕ ಎಸ್.ಕೆ. ಹರನಾಳ, ಜಿಪಂ ಮಾಜಿ ಸದಸ್ಯ ಬಿ.ಎಸ್. ಶಿರೋಳ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಶಿರಸ್ತೇದಾರ ಎಂ.ಎಸ್. ಬಾಗೇವಾಡಿ, ಗಣ್ಯ ವರ್ತಕ ಬಿ.ಎಸ್. ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪಟ್ಟಣದಲ್ಲಿ ಸಂತ ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು.
ಮೆರವಣಿಗೆ ಮಾರ್ಗದಲ್ಲಿ ಕುಡಿವ ನೀರಿಗೆ ಪರದಾಡಿದ ವಿದ್ಯಾರ್ಥಿಗಳು: ಪಟ್ಟಣದ ಸಂತ ಕನಕದಾಸ ಶಾಲೆಯ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳನ್ನು ಸಂತ ಕನಕದಾಸರ ಶಾಲೆಯಲ್ಲಿ ಅಲ್ಪೋಪಹಾರ ಮಾಡಿಸಿಕೊಂಡು ಕನಕದಾಸರ ಭಾವಚಿತ್ರದ ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತು.ಸಂತ ಕನಕದಾಸ ಶಾಲೆಯಿಂದ ಬಸವೇಶ್ವರ ವೃತ್ತ,ಸಂತ ಕನಕದಾಸ ವೃತ್ತ,ಅಂಬೇಡ್ಕರ್ ವೃತ್ತ,ರಾಯಣ್ಣ ವೃತ್ತ,ರಾಘವೇಂದ್ರ ಮಠ,ಲಕ್ಷಿö್ಮÃವೆಂಕಟೇಶ್ವರ ದೇವಸ್ಥಾನ,ಗ್ರಾಮದೇವತೆ ಕಟ್ಟೆ,ಮುಖ್ಯರಸ್ತೆಯಿಂದ ತಾಲ್ಲೂಕು ಆಡಳಿತ ಸೌಧದ ಪಕ್ಕದ ಅಂಬೇಡ್ಕರ ಸಭಾಂಗಣಕ್ಕೆ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಈ ಮಾರ್ಗದಲ್ಲಿ ಬಿಸಿಲಿನಿಂದ ಬಾಯಾರಿದ ವಿದ್ಯಾರ್ಥಿಗಳು ಕುಡಿವ ನೀರಿಗಾಗಿ ಹೊಟೇಲ್,ಅಂಗಡಿಗಳನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಮೋಟಗಿ ಕಾಂಪ್ಲೆಕ್ಸ್ನಲ್ಲಿರುವ ಅಪ್ಸರಾ ಟೇಲರ್ ಅಂಗಡಿಯವರು ತಮ್ಮಲ್ಲಿದ್ದ ಕುಡಿವ ನೀರಿನ ಎರಡು ಕ್ಯಾನಗಳನ್ನು ಮಕ್ಕಳಿಗೆ ಕೊಟ್ಟು ಮಾನವೀಯತೆ ಮೆರೆದರು.ಶಾಲೆ ಆಡಳಿತ ಮಂಡಳಿ ಹಾಗೂ ತಾಲ್ಲೂಕು ಆಡಳಿತ ವಿದ್ಯಾರ್ಥಿಗಳನ್ನು ಕಾಳಜಿಪೂರ್ವಕವಾಗಿ ನಡೆಸಿಕೊಳ್ಳದೇ ಇರುವುದು ಸಾರ್ವಜನಿಕರ ಟೀಕೆಗೆ ಗುರಿಯಾಯಿತು.







