ತಾಳಿಕೋಟಿ : ಮುದ್ದೇಬಿಹಾಳ ತಾಲ್ಲೂಕಿನ ಹಲವು ರೈತರು ರಾಯಚೂರು ಜಿಲ್ಲೆಯಲ್ಲಿರುವ ಆರ್.ಬಿ. ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿದ್ದು, ಕಾರ್ಖಾನೆಯ ಆಡಳಿತ ಮಂಡಳಿಯು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದರೂ ಈವರೆಗೆ ಕಬ್ಬಿನ ದರ ಘೋಷಿಸದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಕೂಡಲೇ ಕಾರ್ಖಾನೆಯು ಕಬ್ಬಿನ ದರ ಪ್ರಕಟಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ದೇವರಾಜ ಗುಂಡಕನಾಳ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತಾಳಿಕೋಟಿ ತಹಶೀಲ್ದಾರ್ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿರುವಂತೆ, ಆರ್.ಬಿ. ಶುಗರ್ಸ್ ಕಾರ್ಖಾನೆಯ ಆಡಳಿತ ಮಂಡಳಿಯು ಕಬ್ಬು ನುರಿಸುವ ಕಾರ್ಯ ಆರಂಭಿಸುವ ಮುನ್ನವೇ ದರ ಘೋಷಣೆ ಮಾಡುವುದಾಗಿ ತಿಳಿಸಿತ್ತು. ಆದರೆ, ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು, ಈವರೆಗೆ ಅಧಿಕೃತವಾಗಿ ಕಬ್ಬಿನ ದರ ಪ್ರಕಟಿಸಿಲ್ಲ ಎಂಬುದು ಸುದ್ದಿಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದರಿಂದ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ತಾವು ಕಷ್ಟಪಟ್ಟು ಬೆಳೆದ ಕಬ್ಬಿಗೆ ಎಷ್ಟು ದರ ದೊರೆಯಲಿದೆ ಎಂಬ ಗೊಂದಲದಲ್ಲಿದ್ದು, ಆತಂಕಕ್ಕೆ ಒಳಗಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ರೈತರಲ್ಲಿರುವ ಗೊಂದಲ ಹಾಗೂ ಆತಂಕ ನಿವಾರಿಸುವ ನಿಟ್ಟಿನಲ್ಲಿ ತಹಶೀಲ್ದಾರ್ ಅವರು ಕೂಡಲೇ ಮಧ್ಯಪ್ರವೇಶಿಸಬೇಕು. ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಚನೆ ನೀಡಿ, ಕಬ್ಬಿನ ದರವನ್ನು ಅಧಿಕೃತ ಲೆಟರ್ಹೆಡ್ನಲ್ಲಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಘೋಷಿತ ದರದ ಮಾಹಿತಿಯನ್ನು ರೈತ ಸಂಘಟನೆ ಹಾಗೂ ಕಬ್ಬು ಬೆಳೆಗಾರರಿಗೆ ಬಹಿರಂಗವಾಗಿ ತಿಳಿಸುವಂತೆ ಒತ್ತಾಯಿಸಿದ್ದಾರೆ.
ಒಂದು ವೇಳೆ ಕೂಡಲೇ ಕಬ್ಬಿನ ದರ ಘೋಷಣೆ ಮಾಡದಿದ್ದರೆ, ರೈತರ ಹಿತದೃಷ್ಟಿಯಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾರ್ಖಾನೆಯ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ದೇವರಾಜ ಗುಂಡಕನಾಳ ಎಚ್ಚರಿಸಿದ್ದಾರೆ.ಶಿರಸ್ತೇದಾರ ಪಾರ್ವತಿ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.







