ಮುದ್ದೇಬಿಹಾಳ : ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವುದರ ಜೊತೆಗೆ ದೈಹಿಕವಾಗಿಯೂ ಸದೃಢಗೊಳಿಸಲು ಕ್ರೀಡೆಗಳು ಮುಖ್ಯ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುತ್ತದೆ ಎಂದು ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ ಹೇಳಿದರು.
ತಾಲೂಕಿನ ಹಡಲಗೇರಿ ವ್ಯಾಪ್ತಿಯ ಬಿಎಎಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಗುರುವಾರ ನಡೆದ ಎರಡನೇ ವಾರ್ಷಿಕ ಕ್ರೀಡೋತ್ಸವವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಶಾಲೆ ಆರಂಭಿಸಿ, ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಬೆಳೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಮಾತನಾಡಿ, ಕ್ರೀಡೆಗಳು ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸಾಮರ್ಥ್ಯವನ್ನೂ ಹೆಚ್ಚಿಸುತ್ತವೆ. ಪಂದ್ಯಾವಳಿಗಳಲ್ಲಿ ಸೋಲನ್ನು ಮೆಟ್ಟಿಲಾಗಿಸಿಕೊಂಡರೆ ಮುಂದಿನ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಬಹುದು. ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟುವ ಸಂಕಲ್ಪದೊAದಿಗೆ ಆರಂಭವಾದ ಶಾಲೆಯಲ್ಲಿ ಎರಡೇ ವರ್ಷಗಳಲ್ಲಿ ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ ಸಂಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಶಿವನಗೌಡ ಬಿರಾದಾರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ. ಮಕ್ಕಳ ಜೊತೆಗೆ ಅವರ ಪಾಲಕರನ್ನೂ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಈ ವರ್ಷದ ಕ್ರೀಡೋತ್ಸವವನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿದ್ದು, ಕೊನೆಯ ದಿನ ಪಾಲಕರಿಗೂ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬೆಳಗಲ್ಲ ಮತ್ತು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಮಾತನಾಡಿದರು.
ಶಿಕ್ಷಕ ಸೀತಾರಾಮ ಲಮಾಣಿ ಮಕ್ಕಳಿಂದ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಸಂಸ್ಥೆಯ ಕಾರ್ಯದರ್ಶಿ ಸುಮಂಗಲಾ ಬಿರಾದಾರ, ಗೀತಾ ಬಿರಾದಾರ, ಪ್ರಾಂಶುಪಾಲ ಅಶೋಕ ತುಪ್ಪದ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮತ್ತು ಸತೀಶ ವಾಲಿಕಾರ ಉಪಸ್ಥಿತರಿದ್ದರು. ಪಲಕ್ ಹಜೇರಿ ಸ್ವಾಗತಿಸಿದರು. ರನ್ವಿತಾ ಅನ್ನಗೌನಿ, ರೀಷಿಕಾ ಸಜ್ಜಮ ಮತ್ತು ರಾಜಮಾ ಕಂದಗಲ್ಲ ನಿರೂಪಿಸಿದರು.







