ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ ನೀರು ಹರಿಸಲಾಗುತ್ತಿದೆ.ಇದು ಗಂಭೀರ ವಿಚಾರವಾಗಿದೆ. ಉತ್ತರ ಕರ್ನಾಟಕದ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ರಾಜಧಾನಿಯಲ್ಲಿರುವ ಆಡಳಿತ ಸೌಧಕ್ಕೆ ತಲುಪಿಸುವ ಕಾರ್ಯವನ್ನು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು ಮಾಡಬೇಕು ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮನವಿ ಮಾಡಿದರು.
ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಒಂದು ತಿಂಗಳ ಹಿಂದೆ ತೆಲಂಗಾಣಕ್ಕೆ ಐದು ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಿಸುವುದನ್ನು ವಿರೋಧಿಸಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿರುವುದರಿಂದ ಕಳೆದ 30–40 ವರ್ಷಗಳಿಂದ ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.
ಇಂತಹ ಸಂದರ್ಭದಲ್ಲಿ ಯಾವುದೇ ಅಧಿಕೃತ ಆದೇಶ ಹೊರಡಿಸದೆ, ಮೌಖಿಕ ಸೂಚನೆ ಮೇರೆಗೆ ಅಕ್ಟೋಬರ್ 8ರಿಂದ ತೆಲಂಗಾಣಕ್ಕೆ ನೀರು ಹರಿಸುವ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಐದು ದಿನ ಮಾತ್ರ ನೀರು ಬಿಡುವುದಾಗಿ ಹೇಳಿದ್ದರೆ, ಒಂದು ತಿಂಗಳವರೆಗೆ ನೀರು ಹರಿಸಲು ಮೌಖಿಕವಾಗಿ ಸೂಚಿಸಲಾಗಿದೆ ಎಂಬ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ನಡಹಳ್ಳಿ ತಿಳಿಸಿದರು.
ಅಧಿಕಾರಿಗಳ ಮಾಹಿತಿ ಪ್ರಕಾರ ಎರಡು ಟಿಎಂಸಿ ನೀರು ಬಿಡುವುದಾಗಿ ಹೇಳಲಾಗಿದ್ದರೂ, ವಾಸ್ತವದಲ್ಲಿ ಸುಮಾರು ಅರ್ಧ ಟಿಎಂಸಿ ನೀರು ಮಾತ್ರ ಹರಿಸಲಾಗುತ್ತಿದೆ. 204 ಕೆರೆಗಳನ್ನು ತುಂಬಿಸಲು ಅಗತ್ಯವಿರುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೇವಲ 5,800 ಕ್ಯೂಸೆಕ್ ನೀರು ಹರಿಸಲು ತಿಳಿಸಲಾಗಿದ್ದು, ಇದರಿಂದ ಶೇ.25ರಷ್ಟು ಮಾತ್ರ ಕೆರೆಗಳನ್ನು ತುಂಬಿಸಲು ಸಾಧ್ಯವಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ ಹೊಲ-ಮನೆಗಳನ್ನು ಕಳೆದುಕೊಂಡವರು ನಮ್ಮ ಭಾಗದ ರೈತರು. ಬೆಳೆಗಳು ಒಣಗುವ ಪರಿಸ್ಥಿತಿಯಲ್ಲಿ ರೈತರು ಮೋಟಾರ್ಗಳ ಮೂಲಕ ನೀರು ಬಳಸಲು ಮುಂದಾದರೆ, ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ನೀರನ್ನು ಬಳಸಬಾರದು ಎಂದು ಅಧಿಕಾರಿಗಳು ನಿರ್ಬಂಧಿಸುತ್ತಾರೆ. ಆದರೆ, ಮತ್ತೊಂದೆಡೆ ಅಧಿಕೃತ ಆದೇಶವಿಲ್ಲದೆ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂಬುದು ವಿಪರ್ಯಾಸ ಎಂದು ನಡಹಳ್ಳಿ ಟೀಕಿಸಿದರು.
ಉತ್ತರ ಕರ್ನಾಟಕದ ಕುರಿತು ಕೆಲವು ಮಾಧ್ಯಮಗಳಲ್ಲಿ ಕುಳಿತು ಉಪದೇಶ ನೀಡುವವರು ಈ ಭಾಗದ ಹೋರಾಟದ ಇತಿಹಾಸವನ್ನೂ ಅರಿಯಬೇಕು. ಗೋಕಾಕ್ ಚಳವಳಿ ಹಾಗೂ ಕರ್ನಾಟಕ ಏಕೀಕರಣದ ಹೋರಾಟಗಳಲ್ಲಿ ಉತ್ತರ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ಆದರೂ, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ನಮ್ಮ ಭಾಗಕ್ಕೆ ಕೃಷಿ ಅಥವಾ ತೋಟಗಾರಿಕೆ ಸಚಿವರು ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿದರು.
ತಾರನಾಳ ಕೆರೆಯ ಜೊತೆಗೆ ಆಲಕೊಪ್ಪರ, ರೂಢಗಿ ಹಾಗೂ ಅಗಸಬಾಳ ಕೆರೆಗಳನ್ನೂ ತುಂಬಿಸಬೇಕು. ಮುಖ್ಯ ಕಾಲುವೆಯ ಮೂಲಕ ಬಿದರಕುಂದಿವರೆಗೆ ನೀರು ಹರಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಕೆರೆಗಳನ್ನು ಕೊನೆಯ ಅಂಚಿನವರೆಗೂ ತುಂಬಿಸುವoತೆ ಮನವಿ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ, ಅಧಿಕಾರಿಗಳು ಹಾಗೂ ಮಾಧ್ಯಮಗಳು ನಿರ್ಲಕ್ಷ್ಯ ವಹಿಸುತ್ತಿರುವುದು ನೋವಿನ ಸಂಗತಿ. ತೆಲಂಗಾಣಕ್ಕೆ ಅನಧಿಕೃತವಾಗಿ ನೀರು ಹರಿಸಲಾಗುತ್ತಿದೆ ಎಂಬ ಆರೋಪದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಶಾಸಕ ನಡಹಳ್ಳಿ ಆಗ್ರಹಿಸಿದರು. ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡ ಪ್ರಭು ಕಡಿ,ಗುರುನಾಥಗೌಡ ಬಿರಾದಾರ, ಎಂ.ಬಿ.ಅoಗಡಿ, ಕೆಂಚಪ್ಪ ಬಿರಾದಾರ,ಸಿದ್ದರಾಜ ಹೊಳಿ,ಅಶೋಕ ರಾಠೋಡ,ಶಿವಪ್ಪ ಲೊಟಗೇರಿ,ಡಾ.ವಿರೇಶ ಪಾಟೀಲ ಮೊದಲಾದವರು ಇದ್ದರು.
ಅ.15ಕ್ಕೆ ನೀರು ಹರಿಸುವ ಭರವಸೆ : ಸಂಕನಾಳ, ಹಣಮನಾಳ, ಮಸೂತಿ ಹಾಗೂ ಮಸಿಬಿನಾಳ ಕಾಲುವೆಗಳಿಗೆ ಇನ್ನೂ ನೀರು ಹರಿಸುವ ಕಾರ್ಯವಾಗಿಲ್ಲ. ತಾರನಾಳ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿದಾಗ, ಕೆಬಿಜೆಎನ್ಎಲ್ನ ಎಸ್ಇ ಗೋವಿಂದ ರಾಠೋಡ ಹಾಗೂ ಅಧಿಕಾರಿ ಅಶೋಕ ರೆಡ್ಡಿ ಅವರು ಅಕ್ಟೋಬರ್ 15ರಂದು ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಅಷ್ಟರ ತನಕ ಕಾಯಲು ಈ ಭಾಗದ ರೈತರು ನಿರ್ಧರಿಸಿದ್ದಾರೆ ಎಂದು ನಡಹಳ್ಳಿ ತಿಳಿಸಿದರು.
ಸರ್ಕಾರದ ಜಾಹೀರಾತು ವೆಚ್ಚದ ಬಗ್ಗೆಯೂ ಪ್ರಶ್ನೆ: ಮುದ್ದೇಬಿಹಾಳ ಕ್ಷೇತ್ರದ ಶಾಸಕರು ಸರ್ಕಾರದ ಹಣದಲ್ಲಿ ಜಾಹೀರಾತು ನೀಡುವುದಕ್ಕಿಂತ ಜನರಿಗೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು. ಬರಗಾಲದ ಸಂದರ್ಭದಲ್ಲಿ ನಿಗಮದ ಹೆಸರಿನಲ್ಲಿ ದೊಡ್ಡ ದೊಡ್ಡ ಫೋಟೋಗಳನ್ನು ಹಾಕಿಕೊಂಡು ಜಾಹೀರಾತು ನೀಡುವುದು ಎಷ್ಟು ಸರಿ ಎಂಬುದನ್ನು ಯೋಚಿಸಬೇಕು ಎಂದು ನಡಹಳ್ಳಿ ಹೇಳಿದರು.ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ನಿಗಮದ ಹಣವನ್ನು ಬಳಸಿಕೊಂಡು ಜಾಹೀರಾತು ನೀಡಿದ್ದರೆ ಅದರ ನೈತಿಕತೆ ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಮುಖ್ಯಮಂತ್ರಿ ಅವರು ಶಾಸಕರನ್ನು ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದ್ದಾರೆಯೇ ಎಂಬುದಕ್ಕೆ ಸಂಬoಧಿಸಿದ ಅಧಿಕೃತ ಆದೇಶದ ಪ್ರತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.







