ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ ಒಳಗಾಗಬೇಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನೂ ಸಹ ರೈತನೇ, ವೇದಿಕೆಯಲ್ಲಿರುವ ಇವರೆಲ್ಲ ಅಧಿಕಾರಿಗಳು ರೈತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಅಪಪ್ರಚಾರ ನಡೆದಿದೆ. ಸರಕಾರ ನಿಮ್ಮ ಪರವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಶಾಸಕ ನಾಡಗೌಡರಿಗೆ ರೈತರೆಂದರೆ ಏಕೆ ಸಿಟ್ಟು ಎಂದು ಶಬ್ದ ಬಳಸಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನಾನು ಎಂದಿಗೂ ರೈತರೊಂದಿಗೆ ಇದ್ದೇನೆ ಎಂದ ಶಾಸಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದರು.
ಪ್ರಜಾಸೇವೆ ಕಾರ್ಯಕ್ರಮ ಜನರೊಂದಿಗೆ ಬೆರೆಯುವ ಮಹತ್ತರ ಆಂದೋಲನವಾಗಿದೆ.ಕೋರ್ಟ್ ವ್ಯಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ಇಲಾಖೆಗಳಿಂದ ಬಂದ ಸಮಸ್ಯೆಗಳಿಗೆ ಸಂಬAಧಿಸಿದ ಅಧಿಕಾರಿಗಳಿಂದ ಪರಿಹಾರ ನೀಡುವ ಒಂದು ಮಹತ್ತರ ಸಭೆ ಇದಾಗಿದೆ ಎಂದರು.
ಬರಲಿರುವ ದಿನಗಳಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ಬೃಹತ್ ಪ್ರಜಾಸೇವೆ ಹಮ್ಮಿಕೊಳ್ಳುತ್ತೇವೆ. ಅಲ್ಲಿಯೂ ಸಹ ತಾವು ಸಮಸ್ಯೆಗಳನ್ನು ಗಮನಕ್ಕೆ ತರಬಹುದು ಎಂದರು.
ಅರ್ಜಿಗಳ ಮಹಾಪೂರ: ನಾಲತವಾಡ ಪಟ್ಟಣಕ್ಕೆ ಪರಿಶಿಷ್ಟ ಜಾತಿ ಮೀಸಲಾತಿಯಡಿ ನೀಲಪ್ಪ ಸಿದ್ದಾಪೂರ ಅವರಿಗೆ ಕೆಂಚಮ್ಮ ದೇವಿ ಅನ್ನಭಾಗ್ಯ ಕೇಂದ್ರ ಮಂಜೂರಾದರೂ ಆರಂಭಕ್ಕೆ ಅನುಮೋದನೆ ನೀಡಿಲ್ಲ, ನಾಗಬೇನಾಳದಲ್ಲಿ ಕುಡಿಯವ ನೀರಿನ ಸಮಸ್ಯೆ, ಅಡವಿ ಹುಲಗಬಾಳ, ಡೊಂಕಮಡು ರಸ್ತೆ ದುರಸ್ತಿ, ಚಿಮ್ಮಲಗಿ ಏತ ನೀರಾವರಿ ಕಾಲುವೆ ದುರಸ್ತಿ, ನಾಲತವಾಡ ಪಟ್ಟಣಕ್ಕೆ ಮಿನಿ ಸಾರಿಗೆ ಘಟಕ, ಪಿಂಚಣಿ ಸಮಸ್ಯೆ, ಖಾನಿಕೇರಿಯಲ್ಲಿ ಅಂಗನವಾಡಿ ನಿರ್ಮಾಣ, ಪಟ್ಟಣದಲ್ಲಿ ಗ್ರಂಥಾಲಯ ನಿರ್ಮಾಣ, ಸವಿತಾ ಸಮಾಜಕ್ಕೆ ಸ್ಮಶಾನ ಸ್ಥಳ ಬೇಡಿಕೆ,ಬಿಜ್ಜೂರ ಗ್ರಾ.ಪಂಯಲ್ಲಿ ನೋಂದಣಿಯಾಗದ 25 ಆಸರೆ ಮನೆಗಳ ಸಮಸ್ಯೆ, ಟ್ಯಾಕ್ಸಿ ಮಾಲೀಕರಿಗೆ ಪಾಕಿಂಗ್ ವ್ಯವಸ್ಥೆ ಸಮಸ್ಯೆ, ಪಂಚಾಯತಿಗಳಲ್ಲಿ ಆಸ್ತಿಗಳ ದಾಖಲೆ ಗೋಲ್ಮಾಲ್, ಮಲಗದಿನ್ನಿ ಕುಡಿಯುವ ನೀರಿನ ಸಮಸ್ಯೆ, ನಾಗರಬೆಟ್ಟ ಬಹು ಹಳ್ಳಿ ಕುಡಿಯುವ ನೀರಿನ ಘಟಕದ ಶುಚಿತ್ವದ ಕೊರತೆ, ಜಗದೇವ ನಗರದಲ್ಲಿ ರಸ್ತೆ, ಚರಂಡಿ ನಿರ್ಮಾಣ, ನಾಲತವಾಡ ಮೂಲಕ ವಡಗೇರಿ ಗ್ರಾಮಕ್ಕೆ ಬಸ್ ಸಂಚಾರ, ಅರಣ್ಯ ಇಲಾಖೆಯಿಂದ ಮರಗಳ ತೆರವು ಬೇಡಿಕೆ ಹಾಗೂ ನೀರು ಹರಿಸುವಿಕೆ ಸೇರಿ ಹಲವಾರು ಸಮಸ್ಯೆಗಳನ್ನು ಶಾಸಕರು ಸ್ವೀಕರಿಸಿದರು.
ಇಲಾಖೆಯಿಂದ ಸಭೆಯಲ್ಲಿ ಕೆಬಿಜೆಎನ್ಎಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಕ್ಷಣ, ಅಬಕಾರಿ, ಪಶು ಸಂಗೋಪನಾ, ಹೆಸ್ಕಾಂ, ಕಂದಾಯ, ಪ.ಪಂ, ಆಹಾರ, ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾ.ಪಂ, ತಾ.ಪಂ, ಪೋಲೀಸ್, ಕಾರ್ಮಿಕ, ಕೃಷಿ, ಸರ್ವೆಯರ್ ಸೇರಿ ಸುಮಾರು 31 ಇಲಾಖೆಯಿಂದ ಅಧಿಕಾರಿಗಳು ಸೇರಿ 150 ಕ್ಕೂ ಹೆಚ್ಚು ಅರ್ಜಿಗಳ ಅಹವಾಲುಗಳನ್ನು ಸ್ವೀಕರಿಸಿದ ನಂತರ ಹಂತ ಹಂತವಾಗಿ ಶೀಗ್ರವೇ ಪರಿಹರಿಸುವ ಭರವಸೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಎ.ಡಿ.ಅಮರಾವದಗಿ, ಉಪ ವಿಭಾಗಾಧಿಕಾರಿ ಜುಪಿಶಾನ್ ಹಕ್, ಪ.ಪಂ ಅಧ್ಯಕ್ಷೆ ಲಲಿತಾ ಗೊರಬಾಳ,ಉಪಾಧ್ಯಕ್ಷರಾದ ಬಸವರಾಜ ಗಂಗನಗೌಡ್ರ, ಪ.ಪಂ ಸಿಓ ಪ್ರಶಾಂತ ಸಿ., ತಾ.ಪಂ ಇಓ ಸಂಗನಗೌಡ ಬಿರಾದಾರ, ಅಕ್ಷರ ದಾಸೋಹ ನಿರ್ದೇಶಕರಾದ ಎಂ.ಎo.ಬೆಳಗಲ್, ಸಿಪಿಐ ಮಹ್ಮದ್ಫಸಿವುದ್ದೀನ್, ಶಂಕರರಾವ್ ದೇಶಮುಖ, ಗುರು ದೇಶಮುಖ, ಶಂಕರಗೌಡ್ರ ಹಿರೇಗೌಡ್ರ, ನಾನಾಸಾಹೇಬ ದೇಶಮುಖ, ಬಾಪುರಾವ್ ದೇಸಾಯಿ, ಗುರು ತಾರನಾಳ, ಡಾ.ಎಸ್.ಬಿ.ಗಂಗನಗೌಡ್ರ, ರಮೇಶ ಆಲಕೊಪ್ಪರ, ಇಇ ಜ್ಞಾನೇಶ ಮುರಾಳ, ಎಸ್.ಬಿ.ಹಿರೇಗೌಡ್ರ, ಶಿವಪ್ಪ ತಾತರಡ್ಡಿ, ಅಮರಪ್ಪ ಗಂಗನಗೌಡ್ರ, ವಿ.ವಿ.ಅಂಬಿಗೇರ, ಎನ್.ಬಿ.ಮಾವಿನಮಟ್ಟಿ, ಗ್ರಾ.ಪಂ ಪಿಡಿಓಗಳು ಹಾಗೂ ಪ.ಪಂ ಸದಸ್ಯರು ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.







