ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.
ಮೃತಪಟ್ಟ ಕಾರ್ಮಿಕನನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕು ಮಣಿಕನಾಳ ಗ್ರಾಮದ ಶ್ರೀಶೈಲ ರಾಮಲಿಂಗ ಮುಗಳಕೋಡ(35)ಎಂದು ಗುರುತಿಸಲಾಗಿದೆ.
ಜತ್ತ ತಾಲ್ಲೂಕಿನಿಂದ 20ಕ್ಕೂ ಹೆಚ್ಚು ಕಾರ್ಮಿಕರು ಕೇಸಾಪೂರ-ಆಲೂರು ಭಾಗದಲ್ಲಿ ನಡೆದಿರುವ ಕಾಲುವೆ ಮರುನವೀಕರಣ ಕೆಲಸಕ್ಕೆ ಬಂದಿದ್ದರು. ಮಂಗಳವಾರ ಮದ್ಯಾಹ್ನ ಏಕಾಏಕಿ ಆರಂಭವಾದ ಸಿಡಿಲು, ಗುಡುಗಿನಿಂದ ಮಳೆಯಿಂದ ಪಾರಾಗಲು ಯತ್ನಿಸಿದರೂ ಶ್ರೀಶೈಲ ಬದುಕುಳಿಯಲಿಲ್ಲ. ಆತನ ಜತೆಗಿದ್ದ ಮರ‍್ನಾಲ್ಕು ಮಹಿಳೆಯರು ಸಿಡಿಲಿನ ಹೊಡೆತದಿಂದ ಬಚಾವಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು. ಮೃತ ಶ್ರೀಶೈಲಗೆ ಒಂದು ಮಗು ಇದ್ದು ಪತ್ನಿ ಆರು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.