
ಯತ್ನಾಳ ಆಪ್ತ, ಜಿಪಂ ಮಾಜಿ ಉಪಾಧ್ಯಕ್ಷ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ : ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಅವರನ್ನು ಉಚ್ಚಾಟಿಸಿದ್ದನ್ನು ವಿರೋಧಿಸುವ ನೆಪದಲ್ಲಿ ಪ್ರತಿಭಟನಾ ರ‍್ಯಾಲಿ ನೆಪವಾಗಿಟ್ಟುಕೊಂಡು ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಅಪಮಾನಿಸುವುದನ್ನು ತಡೆಗಟ್ಟುವಂತೆ ಇಲ್ಲಿನ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಪೊಲೀಸ್ ಠಾಣೆಗೆ ಭಾನುವಾರ ಪತ್ರ ನೀಡಿದ್ದಾರೆ.
ಈ ಕುರಿತು ಸಿಪಿಐಗೆ ಬರೆದಿರುವ ಪತ್ರದಲ್ಲಿ ಏ.7 ರಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹಾಗೂ ಕಾಂಗ್ರೆಸ್‌ನ ಕೆಲವು ಮುಖಂಡರಗಳ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಭಾವಚಿತ್ರಗಳಿಗೆ ಅಪಮಾನಿಸುವ ಉದ್ದೇಶವಿದ್ದು ಜಿಲ್ಲೆಯ ಬೇರೆ ಕಡೆಯಿಂದ ಜನರನ್ನು ಕರೆಯಿಸಿ ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಅಪಮಾನಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಕಂಡು ಬಂದಿದ್ದು ಕೂಡಲೇ ಇಂತಹ ಬೆಳವಣಿಗೆಯನ್ನು ಪೊಲೀಸರು ತಡೆಗಟ್ಟಬೇಕುರ‍್ಯಾಲಿಯಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಬಳಸುವುದಕ್ಕೆ ನಿರ್ಬಂಧಿಸಬೇಕು ಎಂದು ತಿಳಿಸಲಾಗಿದೆ.
ಬಿಜೆಪಿ ಪಕ್ಷದ ನಾಯಕರನ್ನು ಅವಮಾನಿಸುತ್ತಾ ಸಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಇದಕ್ಕೂ ಮೀರಿ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಬಳಸಿ ಅವಮಾನಿಸಿದ್ದೇ ಆದಲ್ಲಿ ಉಗ್ರ ಪ್ರತಿರೋಧ ತೋರಬೇಕಾಗುತ್ತದೆ. ಇದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಶಾಂತಿಭಂಗವಾದಲ್ಲಿ ಅದಕ್ಕೆ ಪೊಲೀಸ್ ಇಲಾಖೆಯಯೇ ಹೊಣೆ ಹೊರಬೇಕಾಗುತ್ತದೆ ಎಂದು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಸಿಪಿಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.