ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೋಟಿ ಗ್ರಾಮದ ರೈತರ ಜಮೀನಿನಲ್ಲಿ ಅಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನನ್ನು ಬುಧವಾರ ಕೊಲೆ (Murder) ಮಾಡಲಾಗಿದೆ.
ಹೊಸಕೋಟೆ ಗ್ರಾಮದ ಪ್ರತಿಷ್ಠಿತ ಕುಟುಂಬದ ಹಿರಿಯ ಬಸನಗೌಡ ಪಾಟೀಲ(75)ಕೊಲೆ ಆಗಿರುವ ವೃದ್ಧ. ಕಬ್ಬಿನ ಗಣಕಿ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ವಾಲಿಕಾರ, ಲಕ್ಷ್ಮಣ ವಾಲಿಕಾರ ಹಾಗೂ ಬಾಳಪ್ಪ ವಾಲಿಕಾರ ಎನ್ನುವ ಬಸನಗೌಡ ಪಾಟೀಲ ಮೂವರು ಸಹೋದರರನ್ನು ಕೆರೂರ ಪೊಲೀಸರು ಬಂಧಿಸಿದ್ದಾರೆ.
ಏನಿದು ಆಸ್ತಿ ವಿವಾದ?
ಮೃತ ಬಸನಗೌಡ ಪಾಟೀಲ ಅವರ ಹಿರಿಯರಿಂದ ಬಂಧಿತ ಆರೋಪಿಗಳ ಹಿರಿಯರು 1977ರಲ್ಲಿ 14 ಎಕರೆ ಜಮೀನು ಖರೀದಿ ಮಾಡಿದ್ದರಂತೆ. ಮಾಲೀಕತ್ವ ಮಾತ್ರ ಖರೀದಿ ಮಾಡಿದವರ ಹೆಸರಿಗೆ ವರ್ಗಾವಣೆ ಆಗಿರಲಿಲ್ಲ. ಆರ್‌ಟಿಸಿಯಲ್ಲಿ ಕೊಲೆಯಾಗಿರುವ ಬಸನಗೌಡ ಅವರ ಸಹೋದರಿ ಹೆಸರು ಇದೆ. ಅವರು ವಿದೇಶದಲ್ಲಿ ಇದ್ದು, ಬಹಳ ದಿನಗಳಿಂದ ಇಲ್ಲಿಗೆ ಬಂದಿಲ್ಲ ಎನ್ನಲಾಗುತ್ತಿದೆ.
ಆದರೆ, ಜಮೀನಿನಲ್ಲಿ ಕೊಲೆ ಆರೋಪಿಗಳು ಸಾಗುವಳಿ ಮಾಡುತ್ತ ಬಂದಿದ್ದರು. ಹತ್ತಿರದಲ್ಲಿ ಬಸನಗೌಡ ಪಾಟೀಲ ಅವರಿಗೆ ಸೇರಿದ ಜಮೀನು ಇದೆ. ತಮ್ಮ ಹಿರಿಯರು ಖರೀದಿ ಮಾಡಿರುವ ಜಮೀನು ಮಾಲೀಕತ್ವ ತಮ್ಮ ಹೆಸರಿಗೆ ಮಾಡಿಸುವಂತೆ ಆಗಾಗ ಅವರನ್ನು ಕೇಳುತ್ತಿದ್ದರು. ಸಹೋದರಿ ವಿದೇಶದಿಂದ ಬಂದ ಮೇಲೆ ಮಾಡಿಸಿಕೊಡುವುದಾಗಿ ಹೇಳುತ್ತಲೇ ಬಂದಿದ್ದರು. ಅದು ಈವರೆಗೂ ಆಗಿರಲಿಲ್ಲ.
ಸೋಮವಾರ ಮೂವರು ಸಹೋದರರು ಹೊಲದಲ್ಲಿ ಇದ್ದಾಗ ಅವರ ಪಕ್ಕದ ಜಮೀನಿಗೆ ಬಸನಗೌಡ ಪಾಟೀಲ ಬಂದಿದ್ದಾರೆ. ಅವರನ್ನು ನೋಡಿ, ಜಮೀನು ತಮ್ಮ ಹೆಸರಿಗೆ ಯಾವಾಗ ಮಾಡಿಸಿಕೊಡುತ್ತೀರಿ. ಬರೀ ಹೇಳುವುದೇ ಆಯಿತು ಎಂದಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಅದು ಕೊನೆಗೆ ವಿಕೋಪಕ್ಕೆ ತಿರುಗಿ ಮೂವರು ಸಹೋದರರು ಸೇರಿ ವೃದ್ಧನಿಗೆ ಕಬ್ಬಿನ ಗಣಕಿ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಂಧಿತ ಆರೋಪಿಗಳು ಕಾಡರಕೊಪ್ಪ ಗ್ರಾಮದವರಾಗಿವು ಬಸನಗೌಡ ಅವರು ಹೊಸಕೋಟೆ ಗ್ರಾಮದವರು.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಹೊಸಕೋಟೆ ವ್ಯಾಪ್ತಿಯ ಜಮೀನಿನಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 1977ರಲ್ಲಿ ನಡೆದಿದ್ದ ಜಮೀನು ಖರೀದಿ ಬಳಿಕ ಮಾಲೀಕತ್ವ ಈ ವರೆಗೂ ಬದಲಾಗಿರಲಿಲ್ಲ. ಅದನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಆಗಾಗ ಹೇಳಿದ್ದು, ಬುಧವಾರ ಇದೇ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದಾರೆ.