ಮುದ್ದೇಬಿಹಾಳ : ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆಗೆ ಮಂಗಳವಾರ ಸಂಜೆ ತೆರೆ ಬಿದ್ದಿತು.
5 ದಿನಗಳವರೆಗೆ ಜರುಗಿದ ಈ ಜಾತ್ರೋತ್ಸವಲ್ಲಿ ದ್ಯಾಮವ್ವನ ಕಟ್ಟೆಯಲ್ಲಿ ಶಾರದಾ ದೇವಿ, ಮಧ್ಯೆದಲ್ಲಿ ಗ್ರಾಮದೇವತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಾಡಿನ ವಿವಿಧ ಕಡೆಗಳಿಂದ ಬಂದ ಲಕ್ಷಾಂತರ ಭಕ್ತರು ತಮ್ಮ ಭಕ್ತಿ ಸಮರ್ಪಿಸಿ ಧನ್ಯತೆ ಮೆರೆದರು.
ಮಂಗಲೋತ್ಸವ ದಿನದಂದು ಶಾರದಾದೇವಿ ಹಾಗೂ ಗ್ರಾಮದೇವತೆಯ ಮೂರ್ತಿಗಳನ್ನು ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಸಿ ಮೂಲ ಸ್ಥಳಕ್ಕೆ ಕಳಿಸಿಕೊಡಲಾಯಿತು.
ಮೆಚ್ಚುಗೆಗೆ ಪಾತ್ರವಾದ ದಾಸೋಹ ಸೇವೆ: ನೂರಾರು ಗಣ್ಯರು ಪ್ರಸಾದ ಸೇವೆಗೆ ಹೆಚ್ಚಿನ ದೇಣಿಗೆ ನೀಡಿದ ಕಾರಣದಿಂದ ಐದು ದಿನಗಳವರೆಗೆ ನಿರಂತರವಾಗಿ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ಪ್ರಸಾದದ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು.ದಿನವೂ ಬೇರೆ ಬೇರೆ ಪದಾರ್ಥಗಳನ್ನು ಮಾಡುವ ಮೂಲಕ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಿದರು.
ಇದಲ್ಲದೇ ಹುಡ್ಕೋದ ಗವಿಸಿದ್ದೇಶ್ವರ ವೇದಿಕೆಯಲ್ಲಿ, ಬಿಡಿಒ ಕ್ವಾರ್ಟರ್ಸ್ನಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ಇಡೀ ಊರಿನ ತುಂಬೆಲ್ಲಾ ಲೈಟಿನ ಅಲಂಕಾರ ಜಾತ್ರೆಯ ಕಳೆಯನ್ನು ಇಮ್ಮಡಿಸಿತ್ತು. ಜಾತ್ರಾ ಕಮೀಟಿಯವರು ಕೈಗೊಂಡ ಸಂಘಟಿತ ಹಾಗೂ ವ್ಯವಸ್ಥಿತ ಯೋಜನೆಗಳಿಂದ ಜಾತ್ರೆ ಅದ್ದೂರಿಯಾಗಿ ಜರುಗಿದ್ದು ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಗೆ ಸಾಕ್ಷಿಯಾಯಿತು. ಪೊಲೀಸ್ ಇಲಾಖೆಯವರು ಕೈಗೊಂಡ ಭದ್ರತೆ, ಟ್ರಾಫಿಕ್ ನಿಯಂತ್ರಣ ಕ್ರಮಗಳು, ಮಾಜಿ ಸೈನಿಕರ ಸೇವೆಯನ್ನು ಜಾತ್ರೆಯಲ್ಲಿ ಸಮಸ್ಯೆ ಕಂಡು ಬರದಂತೆ ಆಯಿತು.