ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ ಚಟುವಟಿಕೆಗಳನ್ನು ಬಲಪಡಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಎಂದು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲ್ಲೂಕಿನ ಹಿರೇಮುರಾಳದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡವನ್ನು ಅಂಕಲಿಮಠದ ವೀರಭದ್ರ ಸ್ವಾಮೀಜಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರು ತಮ್ಮ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಹನಿ ಮತ್ತು ತುಂತುರು ನೀರಾವರಿ, ಸಾವಯವ ಕೃಷಿ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದ್ರಾಕ್ಷಿ, ದಾಳಿಂಬೆ, ಬಾಳೆ, ಬೆಳ್ಳುಳ್ಳಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಬೆಲೆ ಏರಿಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂದರು.
ಕರ್ನಾಟಕದಲ್ಲಿ ಹಲವು ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರಗಳು ಸಾಲ ಮನ್ನಾ ಮಾಡಿರುವುದನ್ನು ಸ್ಮರಿಸಿದ ಅವರು ಕೇಂದ್ರ ಸರ್ಕಾರದಿಂದ ರೈತರಿಗೆ ದೊಡ್ಡ ಪ್ರಮಾಣದ ಸಾಲ ಮನ್ನಾ ಸೌಲಭ್ಯ ದೊರೆತಿರುವುದು ವಿರಳವಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 72 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಲಾಗಿತ್ತು ಎಂದು ತಿಳಿಸಿದರು.
ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ಗಳು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಶೇ.3ರ ಬಡ್ಡಿದರದಲ್ಲಿ ₹15 ಲಕ್ಷದವರೆಗೆ ಸಾಲ ನೀಡಲಾಗುತ್ತಿದ್ದು, ರೈತರು ತಮ್ಮ ತೋಟಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ₹20 ಲಕ್ಷದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಈಗಾಗಲೇ 2–3 ಸಾವಿರ ರೈತರು ಈ ಸೌಲಭ್ಯ ಬಳಸಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಬಾಳೆ, ದ್ರಾಕ್ಷಿ ಹಾಗೂ ದಾಳಿಂಬೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ಹಿರೇಮುರಾಳ ಸಹಕಾರಿ ಸಂಘವು ₹127 ಲಕ್ಷ ಶೇರು ಬಂಡವಾಳ ಹೊಂದಿದ್ದು, ಒಟ್ಟು 273 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 253 ಸಂಘಗಳಿಗೆ ಸ್ವಂತ ಕಟ್ಟಡಗಳಿವೆ ಎಂದು ಹೇಳಿದರು.
ಸಾಲದ ಹಣವನ್ನು ಉದ್ದೇಶಪೂರ್ವಕವಾಗಿ ಬಳಸಬೇಕು. ಯಾವ ಉದ್ದೇಶಕ್ಕಾಗಿ ಸಾಲ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಂಡು ಉತ್ಪಾದನೆ ಹೆಚ್ಚಿಸಬೇಕು. ಸಾಲ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ ಇರುವ ಪ್ರವೃತ್ತಿ ಸರಿಯಲ್ಲ. ರೈತರು ಆರ್ಥಿಕ ಶಿಸ್ತು ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಶಿವಾನಂದ ಪಾಟೀಲ ಕರೆ ನೀಡಿದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಯುವಜನರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯೆ, ಸಂಸ್ಕಾರದ ಜೊತೆಗೆ ಆರ್ಥಿಕ ಶಕ್ತಿ ಇದ್ದಾಗ ಮಾತ್ರ ವ್ಯಕ್ತಿಗೆ ಸಮಾಜದಲ್ಲಿ ಗೌರವ ಮತ್ತು ಆತ್ಮವಿಶ್ವಾಸ ದೊರೆಯುತ್ತದೆ.ಸಹಕಾರಿ ಕ್ಷೇತ್ರದ ಮೂಲಕ ರೈತರಿಗೆ ಕಡಿಮೆ ಬಡ್ಡಿದರದ ಸಾಲ, ಹೈನುಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವು ನೀಡುವ ಕಾರ್ಯ ಆಗುತ್ತದೆ ಎಂದರು.
ಸAಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ಚಂದ್ರಶೇಖರ ರಾಮೋಡಗಿ, ಮುಖ್ಯ ಅತಿಥಿಗಳಾಗಿ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ,ಮಾಜಿ ಉಪಾಧ್ಯಕ್ಷ ಎಂ.ಎಸ್.ಪಾಟೀಲ,ಮುಖAಡರಾದ ಪ್ರಸನ್ನಕುಮಾರ ಜಹಗೀರದಾರ,ಸುನೀಲಕುಮಾರ ಜಹಗೀರದಾರ,ತರಬೇತಿ ಸಂಯೋಜಕ ಆರ್.ಎಂ.ಬಣಗಾರ,ನಿವೃತ್ತ ಸಹಕಾರ ಅಧಿಕಾರಿ ಪಿ.ಬಿ.ಕಾಳಗಿ,ನೋಡಲ್ ಅಧಿಕಾರಿ ಎಸ್.ಎಸ್.ಉಣ್ಣಿಭಾವಿ,ಶಾಖಾ ವ್ಯವಸ್ಥಾಪಕ ಜಿ.ಎನ್.ರಾರಡ್ಡಿ,ಪ್ರಥಮ ದರ್ಜೆ ಗುತ್ತಿಗೆದಾರ ಎನ್.ಎಸ್.ಪೂಜಾರಿ(ಮದರಿ) ಅವರನ್ನು ಸನ್ಮಾನಿಸಲಾಯಿತು.ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಬಾಗೇವಾಡಿ ವರದಿ ವಾಚಿಸಿದರು.ಎಂ.ಬಿ.ಗುಡಗುAಟಿ ನಿರೂಪಿಸಿದರು.







