ಮುದ್ದೇಬಿಹಾಳ : ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ ಮೌಲ್ಯಗಳನ್ನು ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರ ಅವರ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ಅಲಿ ಉಡುಪಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ ಸೀರತ್ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮಹಮ್ಮದ್ ಅವರ ಸಂದೇಶ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿನ ಅಸಮಾನತೆ, ಬಡತನ ಹಾಗೂ ಶೋಷಣೆಯ ವಿರುದ್ಧ ಧ್ವನಿ ಎತ್ತಿ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಬದುಕಿನ ಮಾರ್ಗವನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಎಲ್ಲ ಧರ್ಮಗಳ ಸಾರವೂ ಅಂತಿಮವಾಗಿ ಮಾನವೀಯತೆ, ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯನ್ನೇ ಸಾರುತ್ತದೆ ಎಂದು ಅವರು ಹೇಳಿದರು.
ಓಂ ಶಾಂತಿ ಭವನದ ಬಿಕೆ ರೇಣುಕಾ ಅಕ್ಕನವರು ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಜಾತಿ-ಧರ್ಮದ ಭೇದಗಳನ್ನು ಮೀರಿ ಪ್ರೀತಿ, ತ್ಯಾಗ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪರಿವರ್ತನೆ ತಂದುಕೊAಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಫಾದರ್ ಸುನಿಲ್ ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಸರ್ವಧರ್ಮ ಸಮನ್ವಯದ ಆಶಯವನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ ಹಾಗೂ ಸಹೋದರತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಂ.ಜಿ.ವಿ.ಸಿ ಕಾಲೇಜಿನ ಪ್ರೊ. ಆರ್.ಎಚ್. ಸಜ್ಜನ,ಜಮೆಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದ ಸಂಚಾಲಕ ನೂರೇನಬಿ ನದಾಫ,ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ನಾಸಿರ್ ಹುಸೇನ್ ಪ್ರವಾದಿ ಮೊಹ್ಮದ ಅವರ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.







