ಮುದ್ದೇಬಿಹಾಳ : ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಉಗ್ರರನ್ನು ಸದೆಬಡಿದ ಭಾರತೀಯ ಸೇನೆಯನ್ನು ಅಭಿನಂದಿಸಿ ವಿಜಯೋತ್ಸವವನ್ನು ಆಚರಿಸಲು ಮೇ.20 ರಂದು ಪಟ್ಟಣದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತೀಯ ಸೇನೆಯ ಪರಾಕ್ರಮವನ್ನು ಇಡೀ ವಿಶ್ವವೇ ನಿಬ್ಬೆರಗು ಕಣ್ಣುಗಳಿಂದ ನೋಡುತ್ತಿದೆ. ಆದರೆ, ಕಾಂಗ್ರೆಸ್ಸಿಗರಿಗೆ ಸೇನೆಯ ಮೇಲೆ ಪೂರ್ಣ ನಂಬಿಕೆ ಇಲ್ಲ. ಅದಕ್ಕಾಗಿಯೇ ಆ ಪಕ್ಷದ ನಾಯಕರು ಸೇನೆಯ ಕಾರ್ಯಾಚರಣೆಗೆ ಸಾಕ್ಷಿ ಕೇಳುವ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಸ್ತುತ ಸೈನ್ಯದಲ್ಲಿ ಸೇವೆಯಲ್ಲಿರುವ ಸೈನಿಕರ ಕುಟುಂಬಸ್ಥರನ್ನು ಕರೆದು ಸನ್ಮಾನಿಸುವ ಕಾರ್ಯ ಮಾಡುತ್ತೇವೆ. ಮೇ.೨೦ ರಂದು ಸಂಜೆ 4ಕ್ಕೆ ಮುದ್ದೇಬಿಹಾಳದ ಸೈನಿಕ ಮೈದಾನದಿಂದ ಎಪಿಎಂಸಿಯಲ್ಲಿರುವ ಕರ್ನಾಟಕ ಬ್ಯಾಂಕ್ ಸಭಾಂಗಣದವರೆಗೆ ರ‍್ಯಾಲಿ ನಡೆಸಲಾಗುತ್ತದೆ. ಅಲ್ಲಿ ಸೈನಿಕರ ಕುಟುಂಬದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕೆಲವು ತಿಳಿವಳಿಕೆ ಇಲ್ಲದವರು ಸೇನೆಯ ಕಾರ್ಯಾಚರಣೆಯ ಕುರಿತು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಕೆಲವು ಕಾಂಗ್ರೆಸ್ ಸಚಿವರು, ಶಾಸಕರು ದೇಶದ ಭದ್ರತೆಯ ವಿಷಯದ ಕುರಿತು ಹಗುರವಾಗಿ ಮಾತನಾಡುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.
ಕಾಂಗ್ರೆಸ್‌ನ್ನು ದೇಶದಲ್ಲಿ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಪ್ರಜೆಗಳು ಕಳೆದ 15 ವರ್ಷಗಳಿಂದ ತೀರ್ಪು ಕೊಟ್ಟಿದ್ದಾರೆ. ಯಾರು ದೇಶಪ್ರೇಮಿಗಳು ಯಾರು ಅಲ್ಲ ಎಂಬುದನ್ನು ತಿಳಿಸಿದ್ದಾರೆ. ರಕ್ಷಣಾ ಸಚಿವರು ಭಯೋತ್ಪಾದಕರು ಧರ್ಮ ಕೇಳಿ ನಮ್ಮವರನ್ನು ಹತ್ಯೆ ಮಾಡಿದ್ದಾರೆ. ಆದರೆ ಸೇನೆಯವರು ಭಯೋತ್ಪಾದಕರ ಕರ್ಮ ಕೇಳಿ ಅವರ ಎದೆ ಸೀಳುವ ಕೆಲಸ ಮಾಡಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಎಚ್ಚರದಿಂದ ಮಾತನಾಡಬೇಕು ಎಂದು ಹೇಳಿದರು.
ದೇಶದ ಸೈನ್ಯದ ಕಾರ್ಯಾಚರಣೆಗೆ ಬೆಂಬಲ ಹಾಗೂ ವಿಜಯೋತ್ಸವವಕ್ಕೆ ಪಕ್ಷಾತೀತವಾಗಿ ತಿರಂಗಾಯಾತ್ರೆ ನಡೆಸಲಾಗುತ್ತದೆ. ನಾಗರಿಕ ಸಮಾಜದ ಎಲ್ಲ ಸಂಘಸಂಸ್ಥೆಗಳು ಪಾಲ್ಗೊಳ್ಳಬೇಕು ಎಂದು ವಿನಂತಿಸವುದಾಗಿ ತಿಳಿಸಿದರು.
ವೈದ್ಯಕೀಯ ಪ್ರಕೋಷ್ಠದ ಡಾ. ಸಿ. ಕೆ. ಶಿವಯೋಗಿಮಠ, ಮಾಜಿ ಸೈನಿಕ ಎಸ್. ಕೆ. ಕಟ್ಟಿ, ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾವಸಾಹೇಬ ದೇಸಾಯಿ ಮಾತನಾಡಿದರು. ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಡಾ.ವೀರೇಶ ಪಾಟೀಲ, ಸಂಜೀವ ಬಾಗೇವಾಡಿ, ವಿಜಯಕುಮಾರ ಬಡಿಗೇರ, ಬಿಜೆಪಿ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಇದ್ದರು.