ಮುದ್ದೇಬಿಹಾಳ : ತಾಲ್ಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶಿರೋಳ ಗ್ರಾಮದಲ್ಲಿ ಮೂಲಸೌಕರ‍್ಯಗಳ ಕೊರತೆ ಉಂಟಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶುಕ್ರವಾರ ತಾಪಂ ಇಒ ನಿಂಗಪ್ಪ ಮಸಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಾಪಂ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಇಒಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡ ರಮೇಶ ಬೆಲವಂತ್ರಕAಠಿ ಮಾತನಾಡಿ, ಶಿರೋಳ ಗ್ರಾಮಕ್ಕೆ ಪ್ರಮುಖ ಕುಡಿವ ನೀರಿನ ಮೂಲವಾಗಿರುವ ಬಾವಿ ಪಕ್ಕದ ಹಳ್ಳದ ನೀರಿನ ಜೊತೆ ಸೇರಿ ಕಲುಷಿತಗೊಳ್ಳುತ್ತಿದ್ದು ಅನೇಕ ರೋಗರುಜಿಗಳಿಂದ ಗ್ರಾಮಸ್ಥರು ಬಳಲುವಂತಾಗಿದೆ. ಕೂಡಲೇ ಹಳ್ಳವನ್ನು ಸ್ವಚ್ಛತೆಗೊಳಿಸಲು ಮುಂದಾಗಬೇಕು. ಗ್ರಾಮದಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛತೆಗೊಳಿಸುತ್ತಿಲ್ಲ. ಎರಡು ವರ್ಷದ ಹಿಂದೆ ಆರಂಭವಾಗಿರುವ ಜೆಜೆಎಮ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದ್ದು ಅಗೆದಿರುವ ಗುಂಡಿಗಳಿಂದ ಗ್ರಾಮಸ್ಥರ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ ಎಂದು ದೂರಿದರು.
ವಾಲ್ಮೀಕಿ ಸಮಾಜದ ಮುಖಂಡ ರಾಮಣ್ಣ ರಾಜನಾಳ ಮಾತನಾಡಿ, ಗ್ರಾಮದ ಆಂಜನೇಯ ದೇವಸ್ಥಾನ ಹಾಗೂ ಅಂಬೇಡ್ಕರ್ ಸರ್ಕಲ್ ಹತ್ತಿರ ಕಸ ಸಂಗ್ರಹ ಮೀತಿ ಮೀರಿದ್ದು ಕ್ರಿಮಿಕೀಟಗಳು ಹೆಚ್ಚಾಗಿವೆ. ಕುಡಿವ ನೀರಿನ ಪೈಪಲೈನ್ ಸೋರಿಕೆ ಹೆಚ್ಚಾಗಿದ್ದು ನೀರು ಪೋಲಾಗುತ್ತಿದೆ. ಕುಡಿವ ನೀರು ಕಲುಷಿತವಾಗಿ ಪೂರೈಕೆಯಾಗುತ್ತಿದ್ದು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಗಮನ ಹರಿಸುತ್ತಿಲ್ಲ. ಗ್ರಾಮದಲ್ಲಿ ಬೀದಿ ದೀಪ ವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿದ ತಾಪಂ ಇಒ ನಿಂಗಪ್ಪ ಮಸಳಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮನವಿ ಸಲ್ಲಿಕೆ ಸಮಯದಲ್ಲಿ ಸಿದ್ದಪ್ಪ ಕುರಿ, ಗ್ರಾಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಶಂಕರಗೌಡ ಹುಣಶ್ಯಾಳ, ಸಿದ್ದಪ್ಪ ಚಿಗರಿ, ಶ್ರೀಕಾಂತ ಹೆಬ್ಬಾಳ, ಸಿದ್ದನಗೌಡ ಲೇಬಗೇರಿ, ಗಂಗಾಧರ ಬಡಿಗೇರ, ಅಕ್ರಮ ಮುದ್ನಾಳ, ಮಲ್ಲಿಕಾರ್ಜುನ ಹೆಬ್ಬಾಳ, ಯಲಗೂರೇಶ ನಾವದಗಿ, ಬಸನಗೌಡ ಬಿರಾದಾರ, ಅಜಯ ಪಾಟೀಲ, ಅಮರೇಶ ಮಾಲೀಪಾಟೀಲ ಮೊದಲಾದವರು ಇದ್ದರು.