ಮುದ್ದೇಬಿಹಾಳ (ವಿಜಯಪುರ ಜಿಲ್ಲೆ) : ಹೌದು.2024ರ ಡಿಸೆಂಬರ್ 29 ರಂದು ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಪ್ರತಿಷ್ಠಿತ ಬ್ಯಾಂಕು, ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರಿ ಬ್ಯಾಂಕು ಎಂದು ಪ್ರಶಸ್ತಿ ಪಡೆದುಕೊಂಡಿರುವ ಬ್ಯಾಂಕಿನ ಅಧಿಕಾರಿಗಳಿಂದ ಎಡವಟ್ಟೊಂದು ನಡೆದು ಹೋಗಿದೆ. ಹೊಸ ವರ್ಷದಂದು ಬ್ಯಾಂಕಿನಿಂದ ಕ್ಯಾಲೆಂಡರ್‌ಗಳನ್ನು ವಿತರಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಬ್ಯಾಂಕಿನ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ, ಗ್ರಾಹಕರಿಗೆ ತಿಳಿಯಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.ಅಲ್ಲದೇ ಈ ಕ್ಯಾಲೆಂಡರ್ ವಿತರಣೆಗಾಗಿ ಲಕ್ಷಾಂತರ ರೂ.ಖರ್ಚು ಕೂಡಾ ಬ್ಯಾಂಕಿನಿಂದಲೇ ಹಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಗಿರುವ ಎಡವಟ್ಟು ಏನು: ಡಿ.29 ರಂದು ಪೂರ್ಣ ಪ್ರಮಾಣದ ಫಲಿತಾಂಶ ಬಂದಿದ್ದು ನಾಲ್ವರು ಅವಿರೋಧ ಸೇರಿ ಒಟ್ಟು 13 ಜನ ಸದಸ್ಯರು ಹೊಸದಾಗಿ ಆಯ್ಕೆಯಾಗಿದ್ದಾರೆ.
ಆದರೆ ಬ್ಯಾಂಕಿನ ಹೆಸರಿನ ಮೇಲೆ ಮುದ್ರಿಸಲಾಗಿರುವ 2025ರ ನೂತನ ವರ್ಷದ ಕ್ಯಾಲೆಂಡರ್‌ನಲ್ಲಿ ಹಿಂದಿನ ವರ್ಷದ ಪದಾಧಿಕಾರಿಗಳನ್ನೇ ಮುದ್ರಿಸಲಾಗಿರುವುದು ಸಾರ್ವಜನಿಕರಿಗೆ ಬ್ಯಾಂಕಿನ ಗ್ರಾಹಕರಿಗೆ ತಪ್ಪು ಸಂದೇಶ ರವಾನಿಸಿದಂತಾಗಿದೆ.ಇಂತಹದ್ದೊಂದು ದೊಡ್ಡ ತಪ್ಪು ನಡೆದು ಹೋಗಿದ್ದರೂ ಇಡೀ ಊರಿಗೆ ಬ್ಯಾಂಕಿನ ಹಳೆಯ ಆಡಳಿತ ಮಂಡಳಿಯವರು ಇರುವ ಮಾಹಿತಿಯನ್ನು ಹಂಚುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ಅಲ್ಲದೇ ಹೊಸದಾಗಿ ಆಯ್ಕೆಯಾಗಿರುವ ನಿರ್ದೇಶಕರನ್ನೂ ಕಸಿವಿಸಿಗೊಳಿಸಿದೆ.
ಸದ್ಯಕ್ಕೆ ಬ್ಯಾಂಕಿಗೆ ನಿರ್ದೇಶಕರುಗಳಷ್ಟೇ ಇದ್ದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ.ಆದರೆ 2025ರ ಹನ್ನೆರಡು ತಿಂಗಳಿನ ಕ್ಯಾಲೆಂಡರ್‌ನಲ್ಲಿ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಿದ್ದ ಸತೀಶ ಓಸ್ವಾಲ್ ಹಾಗೂ ಉಪಾಧ್ಯಕ್ಷ ಚೆನ್ನಪ್ಪಗೌಡ ಬಿರಾದಾರ ಅವರೇ ಎರಡು ಹುದ್ದೆಗಳಲ್ಲಿದ್ದು ಮಾಜಿ ಆಗಿರುವ ನಿರ್ದೇಶಕರು ಹಾಲಿ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ.ಅದರಲ್ಲಿ ಮಾಜಿ ಆಗಿರುವ ವೆಂಕನಗೌಡ ಪಾಟೀಲ್, ರವಿ ಕಮತ,ರುದ್ರಪ್ಪ ಕಡಿ, ಶ್ರೀದೇವಿ ಮದರಿ, ದಾನಮ್ಮ ನಾಗಠಾಣ, ಶ್ರೀದೇವಿ ಬೂದಿಹಾಳಮಠ, ಎಸ್.ಎಸ್.ಮಾಲಗತ್ತಿ, ಅನ್ನಪೂರ್ಣ ಪೂಜಾರ, ವೃತ್ತಿಪರ ನಿರ್ದೇಶಕರಾಗಿರುವ ಸುನೀಲ ಇಲ್ಲೂರ, ನಾಗಭೂಷಣ ನಾವದಗಿ, ಹಾಲಿ ನಿರ್ದೇಶಕರ ಸ್ಥಾನದಲ್ಲಿ ಮುಂದುವರೆಸಲಾಗಿದೆ.
ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೇ ನಡೆಯದಿರುವಾಗ ತರಾತುರಿಯಲ್ಲಿ ಬ್ಯಾಂಕಿನಿಂದ ಹಿಂದಿನ ಆಡಳಿತ ಮಂಡಳಿಯವರ ಮಾಹಿತಿ ಬ್ಯಾಂಕಿನಿಂದ ಕೊಟ್ಟಿರುವುದು ಯಾರು ? ಇದು ಜನರಿಗೆ, ಗ್ರಾಹಕರಿಗೆ ತಪ್ಪು ಸಂದೇಶ ಹೋದಂತಾಗುವುದಿಲ್ಲವೇ ? ಹೊಸ ನಿರ್ದೇಶಕರನ್ನು ಜನರಿಗೆ ಪರಿಚಯಿಸಬೇಕಾಗಿದ್ದ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಗೆ ಇದು ತಪ್ಪು ಎನ್ನಿಸಲಿಲ್ಲವೇ ? ಇಂತಹ ತಪ್ಪು ಮಾಹಿತಿ ಇರುವ ಕ್ಯಾಲೆಂಡರ್‌ನ್ನು ಒಂದು ವರ್ಷ ಕಾಲ ಕಚೇರಿ, ಅಂಗಡಿ, ಮನೆಗಳು, ಗ್ರಾಹಕರ ಬಳಿ ಇರಲಿದ್ದು ಆಡಳಿತ ಮಂಡಳಿ ಬಗ್ಗೆ ತಪ್ಪು ಮಾಹಿತಿ ಇರುವ ಕ್ಯಾಲೆಂಡರ್‌ಗಳ ಹಂಚಿಕೆ ನಿಲ್ಲಿಸಿ ಹೊಸ ಆಡಳಿತ ಮಂಡಳಿಯವರು ಇರುವ ಕ್ಯಾಲೆಂಡರ್‌ಗಳನ್ನು ವಿತರಿಸಬೇಕು ಎಂಬ ಮಾತುಗಳು ಗ್ರಾಹಕರಿಂದ ಕೇಳಿ ಬಂದಿವೆ.ಅಲ್ಲದೇ ಈ ತಪ್ಪು ನಡೆದಿರುವುದಕ್ಕೆ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿ ಮಾಡಿ ತಪ್ಪಾಗಿ ಹಿಂದಿನ ಆಡಳಿತ ಮಂಡಳಿಯವರ ಮಾಹಿತಿ ಮುದ್ರಿಸಿರುವ ಕ್ಯಾಲೆಂಡರ್ ವೆಚ್ಚವನ್ನು ಬ್ಯಾಂಕಿನ ಖರ್ಚಿನಲ್ಲಿ ಸೇರಿಸಬಾರದು ಎಂಬ ಆಗ್ರಹಗಳು ಕೇಳಿ ಬಂದಿವೆ.
ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರು : ಪ್ರಭುರಾಜ ಕಲ್ಬುರ್ಗಿ, ಸತೀಶಕುಮಾರ ಓಸ್ವಾಲ್,ನಿಂಗಪ್ಪ ಚಟ್ಟೇರ, ರಾಜಶೇಖರ ಕರಡ್ಡಿ, ಅಜೀತ ನಾಗಠಾಣ,ಸಂಗನಗೌಡ ಬಿರಾದಾರ, ಚಂದ್ರಶೇಖರ ಸಜ್ಜನ, ಚೆನ್ನಪ್ಪಗೌಡ ಬಿರಾದಾರ, ಗುರುಲಿಂಗಪ್ಪಗೌಡ ಪಾಟೀಲ್, ವಿಜಯಲಕ್ಷ್ಮೀ ಬೂದಿಹಾಳಮಠ,ರಕ್ಷಿತಾ ಬಿದರಕುಂದಿ, ಶ್ರೀಕಾಂತ ಚಲವಾದಿ, ಶ್ರೀಶೈಲ ಪೂಜಾರಿ ಅವರು ಬ್ಯಾಂಕಿನ 2025ರಿಂದ ಐದು ವರ್ಷದ ಅವಧಿಗೆ ಮುಂದುವರೆಯಲಿದ್ದಾರೆ.