ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದ್ದಾರೆ.
ದೂರವಾಣಿಯೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಇಂದು ಕೇಂದ್ರ ಸರಕಾರದ ಮಾತುಕತೆ ಮುರಿದು ಬಿದ್ದಿದೆ.ಯಾವುದೇ ಸ್ಪಷ್ಟ ತೀರ್ಮಾನವನ್ನು ಸಚಿವರು ಕೈಗೊಳ್ಳುವಲ್ಲಿ ವಿಫಲರಾಗಿದ್ದು ರಾಜ್ಯದ ಕಬ್ಬು ಬೆಳೆದಿರುವ ರೈತರ ಹಿತ ಕಾಪಾಡಲು ಹೋರಾಟದ ಮಾರ್ಗವೊಂದೇ ಉಳಿದಿದೆ ಎಂದು ತಿಳಿಸಿದ್ದಾರೆ.
ಹೋರಾಟದ ಸಮಯದಲ್ಲಿ ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು ಇನ್ನುಳಿದ ಎಲ್ಲ ವಾಹನಗಳ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.ಹೋರಾಟಕ್ಕೆ ಜಿಲ್ಲೆಯ 13 ತಾಲ್ಲೂಕಿನ ಕಬ್ಬು ಬೆಳೆಗಾರರು ಪಾಲ್ಗೊಳ್ಳುವಂತೆ ಅವರು ಕರೆ ನೀಡಿದ್ದಾರೆ.







