ಮುದ್ದೇಬಿಹಾಳ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಈಚೇಗೆ ಜರುಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ ತಂಡವನ್ನು 40-04 ಅಂಕಗಳ ಭಾರಿ ಅಂತರದಿOದ ಪರಾಭವಗೊಳಿಸುವ ಮೂಲಕ ವಿಜಯಪುರ ಜಿಲ್ಲೆಯ ತಂಡ ಐತಿಹಾಸಿಕ ಸಾಧನೆ ಮಾಡಿದೆ.
ಈ ಸಾಧನೆಗೈದ ಮುದ್ದೇಬಿಹಾಳ ಪಟ್ಟಣದ ಎಸ್.ಎಸ್. ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವಾಧ್ಯಕ್ಷ ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಹಾಗೂ ಸಂಸ್ಥಾಪಕ ಕಾರ್ಯದರ್ಶಿ ರವಿ ಎನ್. ನಾಯಕ ಅವರ ನೇತೃತ್ವದಲ್ಲಿ ಸೋಮವಾರ ಸಂಸ್ಥೆಯ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಮಾತನಾಡಿ,ಐತಿಹಾಸಿಕ ಸಾಧನೆ ತೋರಿರುವ ಕಬಡ್ಡಿ ತಂಡ ಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ರವಿ ಎನ್.ನಾಯಕ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನ ಪಡೆದುಕೊಂಡಿರುವ ನಮ್ಮ ಕಾಲೇಜಿನ ತಂಡದ ಕೋಚ್ ಬಸವರಾಜ ಚಿನ್ನಾಪುರ ಅವರ ಮಾರ್ಗದರ್ಶನದಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ತೋರಿದೆ.ಕೋಚ್ ಬಸವರಾಜ ಅವರ ಛಲಬಿಡದ ಪರಿಶ್ರಮಮದಿಂದ ಸಂಸ್ಥೆಗೆ ಒಳ್ಳೆಯ ಹೆಸರು ಲಭಿಸಿದೆ ಎಂದು ಹೇಳಿದರು.
ಅಲ್ಲದೇ ಅವರಿಗೆ 25 ಸಾವಿರ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಎಂ.ಜಿ.ಎಂ.ಕೆ. ಕಾಲೇಜಿನ ಪ್ರಾಚಾರ್ಯ ಎಸ್.ಕೆ. ಹರನಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಹುರಿದುಂಬಿಸಿದರು.
ಕಾಲೇಜಿನ ಪ್ರಾಚಾರ್ಯ ಮಹಾಂತೇಶ ದೊಡಮನಿ, ಪತ್ರಕರ್ತ ಶಂಕರ ಹೆಬ್ಬಾಳ, ಉಪನ್ಯಾಸಕರಾದ ಸಿದ್ದು ಹಿರೇಮಠ, ಸಂಗಮೇಶ ಕಮತಗಿ, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬಿ.ಜಿ. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.ಮುದ್ದೇಬಿಹಾಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳನ್ನು ಮೆರವಣಿಗೆ ನಡೆಸಲಾಯಿತು.







