ಮುದ್ದೇಬಿಹಾಳ : ಕಬ್ಬು ಬೆಳೆಗಾರರಿಗೆ ಮಂಗಳವಾರ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇನ್ನೂ ಈಡೇರಿಲ್ಲ.ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ಹೆದ್ದಾರಿ ಬಂದ್ ಮಾಡಿ ನಡೆದಿರುವ ರೈತರ ಹೋರಾಟದ ಸ್ಥಳದಲ್ಲಿ ರಾತ್ರಿ 9 ಗಂಟೆಯವರೆಗೂ ಖಚಿತ ತೀರ್ಮಾನ ಹೊರಬಿದ್ದಿಲ್ಲ.
ಹೋರಾಟದ ಸ್ಥಳದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ಕಬ್ಬು ಬೆಳೆಗಾರರ ಹಿತ ಕಾಯಬೇಕಾದ ಜನಪ್ರತಿನಿಧಿಗಳು,ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.ಒಂದು ತಿಂಗಳಪರ್ಯoತ ಹೋರಾಟ ನಡೆಸಿದ್ದರೂ ಈ ಸರ್ಕಾರಕ್ಕೆ ಸ್ಪಂದಿಸುವ ಮನಸ್ಸಿಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಗ್ಯಾರಂಟಿಗಳಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ ಎಂಬ ಬೇಡಿಕೆ ಇರಬೇಕು.ನ್ಯಾಯಯುತ ಬೆಲೆ ರೈತರ ಬೆಳೆಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಠಮಾರಿತನ ಧೋರಣೆಯನ್ನು ಖಂಡಿಸಿದರು.
ಮುಖoಡರಾದ ಗುರುನಾಥಗೌಡ ಬಿರಾದಾರ,ದೇವರಾಜ ಗುಂಡಕನಾಳ,ಶಿವನಗೌಡ ಜಲಪೂರ,ಗುರು ರಾಯಗೊಂಡ,ಶ್ರೀಶೈಲ ಹೂಗಾರ,ಶಿವಾನಂದ ವಾಲಿ,ಬಾಬಾಪಟೇಲ್ ಗುಡ್ನಾಳ,ಗುರುಸಂಗಪ್ಪ ಹಂಡರಗಲ್ ಸೇರಿದಂತೆ ಹಲವರು ಮಾತನಾಡಿ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದರು.
ತಡರಾತ್ರಿಯವರೆಗೂ ನಡೆಯಲಿದೆ ಸಭೆ :
ಬೆಳಗಾವಿಯಲ್ಲಿ ಅಲ್ಲಿನ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಬ್ಬು ಬೆಳೆಗಾರ ಹೋರಾಟಗಾರರ ಸಭೆ ನಡೆಯುತ್ತಿದ್ದು ಸಭೆಯಲ್ಲಿ ರಾತ್ರಿ 9ಗಂಟೆಯವರೆಗೂ ಯಾವುದೆ ತೀರ್ಮಾನ ಹೊರಬಿದ್ದಿಲ್ಲ.ರೈತಪರ ಸಂಘಟನೆಗಳ ಮಧ್ಯೆಯೇ ಗೊಂದಲ ಏರ್ಪಟ್ಟಿರುವ ಕಾರಣ ಗೌಪ್ಯ ಸ್ಥಳದಲ್ಲಿ ಸಭೆ ನಡೆದಿದ್ದು ತಡರಾತ್ರಿಯವರೆಗೂ ಸಭೆ ನಡೆಯಲಿದೆ.ಫಲಿತಾಂಶ ಏನಾಗಲಿದೆ ಎಂಬುದನ್ನು ಅಲ್ಲಿ ಪಾಲ್ಗೊಂಡಿರುವ ರೈತ ಸಂಘದ ಮುಖಂಡರು ಮಾಹಿತಿ ನೀಡಲಿದ್ದಾರೆ ಎಂದು ಹುಲ್ಲೂರ ಗ್ರಾಮದ ಹೋರಾಟದಲ್ಲಿ ಪಾಲ್ಗೊಂಡಿರುವ ಮುಖಂಡ ಶಾಂತಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.







