ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ.
ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ ಪ್ರಮಾಣ ಪತ್ರಗಳನ್ನು ವಿತರಿಸಬೇಕು.ಆದರೆ ಇಲ್ಲಿ ಫಲಿತಾಂಶ ಘೋಷಣೆಯಾಗಿ ವಾರ ಕಳೆದರೂ ಪ್ರಮಾಣ ಪತ್ರ ಕೊಡುವ ಕೆಲಸ ಆಗಿಲ್ಲ.ಅಲ್ಲದೇ ಪ್ರಮಾಣ ಪತ್ರಗಳನ್ನು ನ್ಯಾಯಾಲಯದ ಪ್ರಕರಣಕ್ಕೆ ಒಳಪಟ್ಟಂತೆ ನೀಡಲಾಗಿದೆ ಎಂಬ ಸೂಚನೆಯನ್ನು ಹಾಕಿ ವಿತರಿಸಬಹುದಿತ್ತು.ಆದರೆ ಅಧಿಕಾರಿಗಳು ತಮಗೆ ಈ ವಿಷಯವೇ ತಿಳಿದಿಲ್ಲ ಎಂಬAತೆ ನಡೆದುಕೊಳ್ಳುತ್ತಿರುವುದು ಅಂಜುಮನ್ ಸಂಸ್ಥೆಯ ಚುನಾವಣಾ ಪ್ರಕ್ರಿಯೆಯ ಮೇಲೆ ಹಲವು ಅನುಮಾನಗಳನ್ನು ಸೃಷ್ಟಿಯಾಗುವಂತೆ ಮಾಡುತ್ತವೆ.
ಅಚ್ಚರಿಯ ಸಂಗತಿ ಎಂದರೆ ಆಯ್ಕೆಯಾದ ಸದಸ್ಯರಿಗೆ ಅಧಿಕೃತವಾಗಿ ಪ್ರಮಾಣ ಪತ್ರ ವಿತರಿಸದೇ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.ಆ.೩೧ ರಂದು ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿ ಮಾಡಿದ್ದು ಚುನಾವಣೆಗೆ ನಿಯೋಜಿತರಾದ ಅಧಿಕಾರಿಗಳು ಯಾರ ಅಣತಿಯಂತೆ ಕೆಲಸ ಮಾಡುತ್ತಿದ್ದರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಆಯ್ಕೆಯಗೊಂಡಿರುವ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ನಡೆದಿದ್ದರೂ ಸರ್ಕಾರದ ಪ್ರತಿನಿಧಿಯಾಗಿರುವ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಅಂಜುಮನ್ ಕಮೀಟಿಗೆ ನಿಯೋಜಿತ ಕೇರ್ ಟೇಕರ್ ನಡೆಯ ಬಗ್ಗೆ ಆಗಲೀ, ಚುನಾವಣಾಧಿಕಾರಿ ಪ್ರಮಾಣ ಪತ್ರಗಳನ್ನು ಕೊಡದೇ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸುತ್ತಿರುವುದನ್ನಾಗಲೀ ಪ್ರಶ್ನಿಸುತ್ತಿಲ್ಲ ಎಂದರೆ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಸಂಸ್ಥೆಯ ಚುಕ್ಕಾಣಿ ಚುನಾವಣಾಧಿಕಾರಿ ಬಯಸಿದವರ ಕೈ ಕೊಡಲು ಹೊರಟಿದ್ದಾರೆಯೇ ಎಂಬ ಗುಮಾನಿ ಅಂಜುಮನ್ ಕಮೀಟಿ ಸದಸ್ಯರಲ್ಲಿ ಮೂಡಿದೆ.ಇದಕ್ಕೆ ಉತ್ತರಿಸುವವರು ಯಾರು ?







