ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಳಿಕ ಕರಡು ಪಟ್ಟಿ ಪ್ರಕಟಿಸಲಾಗಿದ್ದು ಯಾರ ಹೆಸರು ಬಂದಿಲ್ಲವೋ ಅವರಿಗೆ ನೋಟಿಸ್ ಕೊಡುವ ಕಾರ್ಯ ಆರಂಭಗೊಳ್ಳಲಿದೆ ಎಂದು ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ತಿಳಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಕುರಿತು ಮಾಹಿತಿ ನೀಡಿದರು.
ಜೂ.29,2026ರಲ್ಲಿ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 246 ಇದ್ದು ಪರಿಷ್ಕರಣೆಯ ಬಳಿಕ ಎಂಟು ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಜೂ.16,2026ರವರೆಗೆ 2,28,285 ಮತದಾರರಿದ್ದು ಎಸ್.ಐ.ಆರ್ ಪ್ರಕ್ರಿಯೆ ಮುಕ್ತಾಯದ ನಂತರ 1,92,295 ಮತದಾರರನ್ನು ಡಿಜಿಟೈಸ್ ಮಾಡಲಾಗಿದೆ.ಎಎಸ್‌ಡಿಡಿಒ ವ್ಯಾಪ್ತಿಯಲ್ಲಿ 35990 ಮತದಾರರು ಒಳಗೊಂಡಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ ನಿಧನರಾದವರು 8858,ಗೈರು ಉಳಿದವರು 2937,ಶಾಶ್ವತವಾಗಿ ಸ್ಥಳಾಂತರ ಹೊಂದಿದವರು19412,ಈಗಾಗಲೇ ನೋಂದಾಯಿಸಿಕೊoಡವರು 4760 ಇದ್ದಾರೆ ಎಂದು ಮಾಹಿತಿ ನೀಡಿದರು.
ಮತಕ್ಷೇತ್ರದಲ್ಲಿ ಮ್ಯಾಪಿಂಗ್ ಹಾಗೂ ಸರಿಯಾದ ದಾಖಲೆಗಳನ್ನು ನೀಡದ ಒಟ್ಟು 3056 ಜನರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಬಿಎಲ್‌ಓಗಳು ಅಂತವರ ಮನೆಗೆ ಬಂದು ನೋಟಿಸ್ ತಲುಪಿಸಲಿದ್ದು ಅಂತಹ ಮತದಾರರು ನೋಟಿಸ್‌ನಲ್ಲಿ ನೀಡಿದ ದಿನಾಂಕದoದು ಹಾಜರಾಗಿ ಸರಿಯಾದ ದಾಖಲೆ ಸಲ್ಲಿಸಿದ್ದಲ್ಲಿ ಅವರ ಹೆಸರನ್ನು ಮತಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಶಿರಸ್ತೇದಾರ ಎಚ್.ಎಂ.ಶಿವಣಗಿ,ಚುನಾವಣಾ ಶಾಖೆ ಸಿಬ್ಬಂದಿ ಮಹೇಶ ಪಾಟೀಲ ಇದ್ದರು. ಹೊಸ ಮತಗಟ್ಟೆಗಳು :
ಮತಗಟ್ಟೆ ಸಂಖ್ಯೆ 69-ಶಿವಪೂರ,105-ಅಡವಿ ಹುಲಗಬಾಳ,113-ಮಾದಿನಾಳ,120-ಹುಲ್ಲೂರ,139-ಆಶ್ರಯ ಕಾಲೋನಿ ಮುದ್ದೇಬಿಹಾಳ,157-ಸರ್ಕಾರಿ ಗಂಡು ಮಕ್ಕಳ ಮಾದರಿ ಉರ್ದು ಶಾಲೆ ಮುದ್ದೇಬಿಹಾಳ, 169-ಹಿರೇಮುರಾಳ, 229-ಕೇಸಾಪೂರದಲ್ಲಿ ತೆರೆಯಲಾಗಿದೆ ಎಂದು ವಿವರ ನೀಡಿದರು.
ಆಕ್ಷೇಪಣೆ ಸಲ್ಲಿಕೆಗೆ ದಿನಾಂಕ ನಿಗದಿ:
ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಮತದಾರರ ನೋಂದಣಿ ಸಂಬoಧಿಸಿದ ಆಕ್ಷೇಪಣೆಗಳನ್ನು ಆ.24 ರಿಂದ ಸೆ.23ರವರೆಗೆ ನೀಡಲಾಗಿದೆ.ಅಲಭ್ಯ ಮತದಾರರಿಗೆ ಆ.24 ರಿಂದ ಅ.22ರವರೆಗೆ ನೋಟೀಸ್ ನೀಡುವ ಪ್ರಕ್ರಿಯೆ ಚಾಲನೆಯಲ್ಲಿರಲಿದೆ.ಅ.27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ತಿಳಿಸಿದರು.







